ದಾವಣಗೆರೆ : ದಾವಣಗೆರೆಯಲ್ಲಿ 120 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದ್ದು ಡಿಸೆಂಬರ್ ಅಂತ್ಯದ ವೇಳೆ ಇದರ ಉದ್ಘಾಟನೆ ನೆರವೇರಿಸಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿಯವರು ತಿಳಿಸಿದರು.
ಅವರು ಬುಧವಾರ ದಾವಣಗೆರೆ ನಗರದ ಪಿ.ಬಿ.ರಸ್ತೆಯಲ್ಲಿ ನಿರ್ಮಾಣಗುತ್ತಿರುವ ಬಸ್ ನಿಲ್ದಾಣ ಕಾಮಗಾರಿಯನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರೊಂದಿಗೆ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು.
ಕೆ.ಎಸ್.ಆರ್.ಟಿ.ಸಿ.ಗೆ 5000 ಬಸ್ ಖರೀದಿ: ಈ ಹಿಂದೆ 4000 ಬಸ್‍ಗಳ ಖರೀದಿಗೆ ಟೆಂಡರ್ ಆಗಿದ್ದು ಇದರೊಂದಿಗೆ ಈಗ 1000 ಬಸ್‍ಗಳನ್ನು ಖರೀದಿ ಸೇರಿ ಒಟ್ಟು 5 ಸಾವಿರ ಬಸ್‍ಗಳನ್ನು ಖರೀದಿಸಲಾಗುತ್ತಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಬಸ್‍ಗಳು ಇರಲಿವೆ. ನಗರ, ಗ್ರಾಮೀಣ ಸಾರಿಗೆಗೆ ಎಲೆಕ್ಟ್ರಾನಿಕ್ ಬಸ್‍ಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದರು. 16 ಸಾವಿರ ಹುದ್ದೆಗಳು ಖಾಲಿ; 2016 ರಿಂದ ಸುಮಾರು 16 ಸಾವಿರ ಸಿಬ್ಬಂದಿಗಳು ನಿವೃತ್ತರಾಗಿದ್ದು ನೇಮಕಾತಿ ಪ್ರಕ್ರಿಯೆ ನಡೆದಿರುವುದಿಲ್ಲ. ಇದರಿಂದ ಹೆಚ್ಚುವರಿ ಬಸ್‍ಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಹಂತ ಹಂತವಾಗಿ ಖಾಲಿ ಇರುವ ನಾಲ್ಕು ನಿಗಮಗಳ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತದೆ ಎಂದರು.
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ ನೂತನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವು ಎಲ್ಲಾ ನಾಗರೀಕ ಸೌಲಭ್ಯವನ್ನು ಹೊಂದಲಿದ್ದು ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಇಲ್ಲಿರಲಿದೆ. ನಗರದಲ್ಲಿ ಟ್ರಕ್ ಟರ್ಮಿನಲ್ ಅಗತ್ಯವಿದ್ದು ಸ್ಥಳದ ಬಗ್ಗೆ ಸಭೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳಾವಕಾಶ ಕಲ್ಪಿಸಿ ಟರ್ಮಿನಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ವೇಳೆ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಕೆ.ಎಸ್.ಆರ್.ಟಿ.ಸಿ.ಎಂ.ಡಿ ಅನ್ಬುಕುಮಾರ್ ಉಪಸ್ಥಿತರಿದ್ದರು