ದೆಹಲಿ: ಚಂದ್ರಯಾನ-3 ಮಿಷನ್ ಯಶಸ್ವಿಯಾಗುವ ಮೂಲಕ ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸುವ ಮೊದಲ ದೇಶವಾಗಿದೆ ಭಾರತ .ಕೆಲವು ದಿನಗಳ ಹಿಂದೆ, ರಷ್ಯಾದ ಲೂನಾ -25 ಅದೇ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುವಾಗ ಚಂದ್ರನ ಮೇಲ್ಮೈಗೆ ಅಪ್ಪಳಿಸಿತು. ಚಂದ್ರಯಾನವನ್ನು ಇಡೀ ಜಗತ್ತೇ ಕಾತರದಿಂದ ನೋಡುತ್ತಿದ್ದು, ಭಾರತ ಯಶಸ್ಸು ಸಾಧಿಸಿದೆ.
ಜುಲೈ 14 ರಂದು ಉಡಾವಣೆಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮೂರನೇ ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಇಂದು ಸಂಜೆ ಸುಮಾರು 6.04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇತಿಹಾಸ ಸೃಷ್ಠಿಸಿದ್ದು, ಈ ಮೂಲಕ ಇಸ್ರೋ ದಶಕಗಳ ಕನಸು ನನಸಾಗಿದ್ದು, ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆಗಿದೆ. ಈ ಮೂಲಕ ಇಸ್ರೋ ವಿಜ್ಞಾನಿಗಳು ಇತಿಹಾಸ ಸೃಷ್ಠಿಸಿದ್ದಾರೆ.
ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಸುಸೂತ್ರವಾಗಿ ಇಳಿದ ಹಿನ್ನೆಲೆ ಇಸ್ರೋ ವಿಜ್ಞಾನಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.ಚಂದ್ರಯಾನ-3 ಮಿಷನ್ ಸಾಫ್ಟ್ ಲ್ಯಾಂಡಿಂಗ್ ಆದ ನಂತರ ಬೆಂಗಳೂರಿನ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ವಿಜ್ಞಾನಿಗಳ ತಂಡವನ್ನು ಉದ್ದೇಶಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, ‘ಭಾರತ ಈಗ ಚಂದ್ರನ ಮೇಲಿದೆ’ ಎಂದು ಹೇಳಿದ್ದಾರೆ.
ಈ ಐತಿಹಾಸಿಕ ಸಾಧನೆಯೊಂದಿಗೆ, ಚಂದ್ರನ ಮೇಲೆ ಮೃದುವಾದ ಲ್ಯಾಂಡಿಂಗ್ ಅನ್ನು ಪ್ರದರ್ಶಿಸಿದ ವಿಶ್ವದ ನಾಲ್ಕನೇ ದೇಶ ಭಾರತವಾಗಿದೆ. ಭಾರತ ಈಗ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ವಿಶ್ವದ ಮೊದಲ ದೇಶವಾಗಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂತಹ ಐತಿಹಾಸಿಕ ಕ್ಷಣಗಳನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇದು ಹೊಸ ಭಾರತದ ಉದಯ. ಚಂದ್ರಯಾನ-3 ಯಶಸ್ಸು ಭಾರತವನ್ನು ಚಂದ್ರನ ಕ್ಷಿತಿಜದ ಆಚೆಗೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ.
ನಾನೂ ನೀನೂ ಗಮ್ಯ ತಲುಪಿದೆವು: ಇಸ್ರೋ ಟ್ವೀಟ್
ಚಂದ್ರಯಾನ ಯಶಸ್ವಿ ಆದ ನಂತರ ಟ್ವೀಟ್ ಮಾಡಿದ ಇಸ್ರೋ ಭಾರತ ಮತ್ತು ಚಂದ್ರಯಾನ -3 ಎರಡೂ ಗಮ್ಯ ತಲುಪಿದೆ ಎಂದು ಟ್ವೀಟ್ ಮಾಡಿದೆ.