Sunday, April 20, 2025
Google search engine

Homeರಾಜ್ಯಸುದ್ದಿಜಾಲವರಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ ಹೂವು, ಹಣ್ಣುಗಳ ರೇಟ್!

ವರಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ ಹೂವು, ಹಣ್ಣುಗಳ ರೇಟ್!

ಮೈಸೂರು: ಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ, ಶ್ರಾವಣಮಾಸದ ಮೊದಲ ಹಬ್ಬ ವರಮಹಾಲಕ್ಷ್ಮಿ ಹಬ್ಬಕ್ಕೆ ಮೈಸೂರಿನಲ್ಲಿ ಸಿದ್ಧತೆ ಜೋರಾಗಿದ್ದು, ಸಾರ್ವಜನಿಕರು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಹೆಂಗಳೆಯರ ಪ್ರಮುಖ ಹಬ್ಬ ಎನಿಸಿರುವ ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಬುಧವಾರವೇ ಸಿದ್ಧತೆ ನಡೆಸಿರುವ ಮಹಿಳೆಯರು ನಗರದ ಪ್ರಮುಖ ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಧನ್ವಂತ್ರಿ ರಸ್ತೆ, ಜೆ.ಕೆ.ಮೈದಾನ, ನಂಜುಮಳಿಗೆ ವೃತ್ತ, ಅಗ್ರಹಾರ ಮತ್ತು ವಾಣಿವಿಲಾಸ ಮಾರುಕಟ್ಟೆಗೆ ಭೇಟಿ ನೀಡಿ ಹಬ್ಬಕ್ಕೆ ಬೇಕಾದ ಪದಾರ್ಥಗಳು, ಹೂವು ಹಣ್ಣು ಸೇರಿದಂತೆ ಪೂಜಾ ಸಾಮಾಗ್ರಿಗಳನ್ನು ಖರೀದಿಸಿದರು. ಇದರಿಂದಾಗಿ ದೇವರಾಜ ಮಾರುಕಟ್ಟೆ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.

ವರಮಹಾಲಕ್ಷ್ಮೀ ಹಬ್ಬವಾದ್ದರಿಂದ ಹೂವಿಗೆ ಹೆಚ್ಚು ಬೇಡಿಕೆ ಇದ್ದು, ಬೆಲೆ ಬೇರೆ ದಿನಗಳಿಗೆ ಹೋಲಿಸಿದರೆ ಹೆಚ್ಚಾಗಿತ್ತು. ಲಕ್ಷ್ಮೀಪೂಜೆಗೆ ಬಳಸುವ ಹೂವುಗಳ ಬೆಲೆ ದುಪ್ಪಟ್ಟಾಗಿದ್ದು, ಹಣ್ಣು ತರಕಾರಿಗಳ ಬೆಲೆಯಲ್ಲೂ ಏರಿಕೆಯಾಗಿದೆ. ಜವಳಿ ಮಳಿಗೆಗಳಲ್ಲಿ ಹಬ್ಬದ ದಿನದಂದು ಮುತ್ತೈದೆಯರಿಗೆ ಅರಿಶಿಣ ಕುಂಕುಮದೊಂದಿಗೆ ನೀಡುವ ರವಿಕೆ ಬಟ್ಟೆ ಕೊಳ್ಳುವುದರಲ್ಲಿ ಮಹಿಳೆಯರು ನಿರತರಾಗಿದ್ದರು. ಇದರಿಂದ ಉಮಾಚಿತ್ರ ಮಂದಿರ, ಕೆ.ಟಿ.ಸ್ಟ್ರೀಟ್ ಸುತ್ತಮುತ್ತಲ ಹೋಲ್‌ಸೇಲ್ ಅಂಗಡಿಗಳಲ್ಲಿ ಜನಜಂಗುಳಿಯಿತ್ತು. ಹೊಸದಾಗಿ ಲಕ್ಷ್ಮೀ ಇರುವ ಭಾವಚಿತ್ರ, ಮುಖವಾಡ ಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ಲಕ್ಷ್ಮೀ ಮುಖವಾಡ, ಬಳೆ ಖರೀದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ಪ್ರಮುಖವಾಗಿ ಬೇಕಾಗಿರುವ ಲಕ್ಷ್ಮೀ ಮುಖವಾಡ, ಬಳೆ ಖರೀದಿ ಭರಾಟೆ ಜೋರಾಗಿತ್ತು. ತಮ್ಮ ಶಕ್ತ್ಯಾನುಸಾರ ಚಿನ್ನ, ಬೆಳ್ಳಿ, ಮೆಟಲ್ ಲಕ್ಷ್ಮೀ ಮುಖವಾಡ ಖರೀದಿಸಿದರು. ಮುತ್ತೈದೆಯರಿಗೆ ನೀಡಲು ಬಳೆಗಳ ಖರೀದಿಯೂ ಜೋರಾಗಿತ್ತು. ಇದರಿಂದಾಗಿ ಬಳೆ ಅಂಗಡಿಗಳು ಮಹಿಳೆಯರಿಂದಲೇ ತುಂಬಿದ್ದವು.


ಬೆಲೆ ಏರಿಕೆ ಬಿಸಿ: ವರಮಹಾಲಕ್ಷ್ಮೀ ಹಬ್ಬಕ್ಕೆ ಹೆಚ್ಚಾಗಿ ಬಳಕೆಯಾಗುವ ವೀಳ್ಯದೆಲೆ, ಹೂವು, ನಿಂಬೆಹಣ್ಣು, ವಿವಿಧ ಹಣ್ಣುಗಳ ಬೆಲೆ ಏರಿಕೆಯಾಗಿದೆ. ಅದರಂತೆ ಸೇವಂತಿ ೧೦೦-೧೨೦ರೂಗೆ ಏರಿಕೆಯಾಗಿದೆ. ಕನಕಾಂಬರ ಕೆಜಿಗೆ ೨೦೦೦ ರೂಗೆ ಏರಿಕೆಯಾಗಿದ್ದು, ದುಬಾರಿಯಾಗಿದೆ. ಮಲ್ಲಿಗೆ ಕೆಜಿಗೆ ೧೨೦೦, ಗಣಿಗಲೆ ಹೂವು ೩೨೫-೩೫೦ ರೂ, ಗುಲಾಬಿ ಕೆಜಿ ೪೦೦, ಮರಳೆ ೮೦೦, ಕಾಕಡ,ಪನ್ನಿರ್ಎಲೆ, ತಾವರೆ ಹೂವಿನ ಬೆಲೆಯೂ ಏರಿಕೆಯಾಗಿದೆ. ಲಕ್ಷ್ಮೀ ಹಬ್ಬಕ್ಕೆ ಹೆಚ್ಚು ಬಳಸುವ ತಾವರೆ ಹೂವು ೨೦ರಿಂದ ೪೦ರೂ ಆಗಿದೆ. ವೀಳ್ಯದೆಲೆ ಹಾಗೂ ನಿಂಬೆ ಹಣ್ಣಿನ ಬೆಲೆಯೂ ಹೆಚ್ಚಾಗಿದೆ. ನಿಂಬೆ ಹಣ್ಣು ನಿಂಬೆ ಗಾತ್ರಕ್ಕೆ ತಕ್ಕಂತೆ ೧೦ ರೂ. ನಿಂದ ೫ ರೂ.ವರೆಗೆಮಾರಾಟ ಮಾಡುತ್ತಿzವೆ. ವೀಳ್ಯದ ಎಲೆ ಗುಣಮಟ್ಟಕ್ಕೆ ತಕ್ಕಂತೆ ಒಂದು ಕಟ್ಟಿಗೆ ೮೦ ರೂ. ನಿಂದ ೧೮೦ ರೂ. ವರೆಗೂ ಮಾರಾಟವಾಗುತ್ತಿದೆ.


ಹಣ್ಣುಗಳ ಬೆಲೆಯೂ ಏರಿಕೆ: ಹಣ್ಣುಗಳ ಬೆಲೆಯಲ್ಲ್ಲೂ ೧೦ರಿಂದ ೨೦ ರೂ ಹೆಚ್ಚಳವಾಗಿದೆ. ದಾಳಿಂಬೆ, ಸೇಬು, ಬಾಳೆಹಣ್ಣು, ಮೋಸಂಬಿ ಕಿತ್ತಳೆ ಸೇರಿದಂತೆ ವಿವಿಧ ಹಣ್ಣುಗಳ ಬೆಲೆಯೂ ಏರಿಕೆಯಾಗಿದ್ದು, ಪೂಜೆಯಂದು ದೇವಿಯ ಮುಂದೆ ಒಂಬತ್ತು ತಟ್ಟೆಯಲ್ಲಿ ಹಣ್ಣುಗಳನ್ನು ಇಡಬೇಕಿರುವುದರಿಂದ ಜನರು ಹಣ್ಣುಗಳ ಖರೀದಿಗೆ ಮುಗಿಬಿದ್ದರು. ಬಾಳೆಹಣ್ಣು ೯೦-೧೦೦, ಸೇಬು ಕೆಜಿಗೆ ೧೫೦-೨೨೦ ರೂ, ಮೋಸಂಬಿ ೧೦೦ ರೂ, ಕಿತ್ತಳೆ ೧೪೦ ರೂ, ದಾಳಿಂಬೆ ೧೬೦-೨೦೦ ರೂ, ಮರಸೇಬು ೧೮೦ ರೂ, ಸೀತಾಫಲ ೮೦ ರೂ, ಅನಾನಸ್ ೫೦ ರೂಗೆ ಮಾರಾಟವಾಗುತ್ತಿದೆ. ತರಕಾರಿ ಬೆಲೆಯೂ ಕೊಂಚ ಏರಿಕೆಯಾಗಿದೆ.

ಮಾರುಕಟ್ಟೆಯಲ್ಲಿ ಜನಜಂಗುಳಿ: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ನಗರದ ದೇವರಾಜ ಮಾರುಕಟ್ಟೆಗೆ ಆಗಮಿಸಿದ್ದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು. ಹಬ್ಬಕ್ಕಾಗಿ ಅಗತ್ಯ ವಸ್ತುಗಳಾದ ಪೂಜಾ ಸಾಮಗ್ರಿ, ಹೂ, ಹಣ್ಣು ಸೇರಿದಂತೆ ತರಕಾರಿ ಖರೀದಿಸಲು ಬುಧವಾರ ದೇವರಾಜ ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದರು. ಹೆಚ್ಚಾಗಿ ಜನರು ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿದ್ದರಿಂದ ಮಾರುಕಟ್ಟೆ ಜನಸಂದಣಿಯಿಂದ ಕೂಡಿತ್ತು. ಜನ ಕಿಕ್ಕಿರಿದು ತುಂಬಿದ್ದರು. ದೇವರಾಜ ಮಾರುಕಟ್ಟೆ ಒಳಗೆ ಕಾಲಿಡಲು ಪರದಾಡುವ ಪರಿಸ್ಥಿತಿ ಇತ್ತು. ಹೂವು, ಹಣ್ಣಿನ ಸ್ಟಾಲ್ ಇರುವ ಕಡೆಗೆ ಒಂದೊಂದು ಹೆಜ್ಜೆ ಇಡಲು ಹರಸಾಹಸ ಪಡಬೇಕಾಯಿತು. ಚಿಕ್ಕ ಗಡಿಯಾರದ ಸುತ್ತಲು ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಪರದಾಡಿದರು. ಗುರುವಾರ ಖರೀದಿ ಮತ್ತಷ್ಟು ಹೆಚ್ಚಾಗಲಿದ್ದು, ದರವೂ ಏರಿಕೆಯಾಗುವ ಸಾಧ್ಯತೆ ಇದೆ.

RELATED ARTICLES
- Advertisment -
Google search engine

Most Popular