ಧಾರವಾಡ : ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು ಪ್ರತಿಯೊಬ್ಬರಲ್ಲಿಯೂ ಸುರಕ್ಷತೆ ಭಾವ ಮೂಡಿಸಲು ಮತ್ತು ಪೊಲೀಸ್, ಪ್ರಮುಖ ಕಾನೂನುಗಳ ಬಗ್ಗೆ ಯುವ ಸಮುದಾಯ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ವಿನೂತನ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ತಿಂಗಳಿಗೊಮ್ಮೆ ಮಹಾನಗರದ ಒಂದು ಶಾಲೆ ಅಥವಾ ಕಾಲೇಜಿನಲ್ಲಿ ಪೊಲೀಸ್ ದಿನ ಆಚರಿಸಲು ನಿರ್ಧರಿಸಲಾಗಿದೆ. ಈ ವಿಶೇಷ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಿ, ಯಶಸ್ವಿಗೊಳಿಸಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ತಿಳಿಸಿದರು.
ಅವರು, ಇಂದು ಬೆಳಿಗ್ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತಾಲಯವು ವಿದ್ಯಾರ್ಥಿ ಸಮೂಹ, ಯುವ ಸಮುದಾಯದಲ್ಲಿ ಪೊಲೀಸ್ ವ್ಯವಸ್ಥೆ, ಸಂಚಾರಿ ನಿಯಮ, ಪ್ರಮುಖ ಕಾನೂನುಗಳ ಅರಿವು ಮೂಡಿಸಲು ಆರಂಭಿಸಿರುವ ವಿನೂತನ ಸರಣಿ ಪೋಲಿಸ್ ದಿನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಸಮಾಜ ಸೌಹರ್ದತೆ ಮತ್ತು ಶಂತಿಯುತವಾಗಿರಬೇಕು. ಪ್ರತಿಯೊಬ್ಬರಲ್ಲೂ ಸುರಕ್ಷತೆ ಭಾವ ಮೂಡಬೇಕು. ಇದು ಬರೀ ಪೊಲೀಸ್ ರ ಜವಾಬ್ದಾರಿ ಮಾತ್ರವಲ್ಲ; ಪ್ರತಿ ನಾಗರಿಕರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಸಾಮಾಜಿಕ ಜಾಲತಾಣಗಳು ಇಂದು ನಮ್ಮ ಜೀವನದ ಅತ್ಯಗತ್ಯ ಭಾಗಗಳಾಗಿವೆ. ಅವುಗಳನ್ನು ಬಳಸದ ದಿನವಿಲ್ಲ. ಆದರೆ ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಎಚ್ಚರವಿರಲಿ. ವಿಜ್ಞಾನ, ತಂತ್ರಜ್ಞಾನ ಸಮಾಜದ ಏಳಿಗೆಗೆ ಮತ್ತು ಅಭಿವೃದ್ಧಿ ಬೇಕು. ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸಲು, ಉತ್ತಮ ವ್ಯಕ್ತಿತ್ವ ಬೆಳೆಸಲು ಸಾಮಾಜಿಕ ಜಾಲತಾಣಗಳ ಬಳಕೆ ಆಗಬೇಕು. ಆದರೆ ಅನೇಕರು ಅರಿವಿನ ಕೊರತೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೋಸ, ವಂಚನೆಗೆ ಒಳಗಾಗುತ್ತಿದ್ದಾರೆ. ಬಳಕೆಯಲ್ಲಿ ಜಾಗೃತಿ ಇರಬೇಕು. ತೊಂದರೆ ಉಂಟಾದಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ, ಅದನ್ನು ಪರಿಹರಿಸಲಾಗುವುದು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತ ಪ್ರಸಾದ ಅವರು ಮಾತನಾಡಿ, ಅತಿಯಾದ ಮೊಬೈಲ್ ಬಳಕೆ ಮತ್ತು ಮಾದಕವಸ್ತುಗಳಿಂದ ಯುವ ಸಮೂಹ ದಾರಿ ತಪ್ಪುತ್ತಿದೆ. ಮನೆ, ಶಾಲಾ ಹಂತದಲ್ಲಿ ಸಮಾಜಘಾತುಕ ಚಟುವಟಿಕೆಗಳ ಬಗ್ಗೆ ಮಕ್ಕಳಲ್ಲಿ ಸರಿಯಾದ ಅರಿವು ಮೂಡಿಸಬೇಕು. ಇದು ಪಾಲಕರ ಕರ್ತವ್ಯ. ಎಲ್ಲರೂ ಸೇರಿ ಸಮಾಜ ರಕ್ಷಿಸುವ ಅಗತ್ಯವಿದೆ ಎಂದರು.ಪೊಲೀಸ್ ಇಲಾಖೆ ಹೊಸದಾಗಿ ಆರಂಭಿಸಿರುವ ಪೊಲೀಸ್ ದಿನ ಕಾರ್ಯಕ್ರಮ ಸನ್ನಡತೆಯ ಸಮಾಜ ನಿರ್ಮಾನಕ್ಕಾಗಿ ಒಂದು ಜನಾಂದೋಲನವಾಗಿ ರೂಪುಗೊಳ್ಳಬೇಕು. ಇದಕ್ಕೆ ಅವಳಿನಗರದ ಎಲ್ಲ ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು, ಪಾಲಕರ ಸಂಘಗಳು ಸಹಕಾರ ನೀಡಬೇಕೆಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಧಾರವಡದ ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ್ ಟಿ., ಜೆಎಸ್ ಎಸ್ ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯಾಯ , ಜೆಎಸ್ಎಸ್ ಪಿಯು ಕಾಲೇಜ ಪ್ರಾಚಾರ್ಯ ವೈ.ಎಸ್.ರಾಯಬಾಗಿ, ಸಂಚಾರಿ ಪಿಐ ಮಲ್ಲನಗೌಡ ನಾಯ್ಕರ,ಇದ್ದರು. ಪೊಲೀಸ್ ಇನ್ಸ್ಪೆಕ್ಟರ್ ಶಂಕರಗೌಡ ಬಸನಗೌಡರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನಗರ ಠಾಣೆ ಪಿಐ ಎನ್.ಸಿ.ಕಾಡದೇವರಮಠ ವಂದಿಸಿದರು. ಆಕಾಶವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ, ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ಎಸ್.ಹೂಗಾರ, ವಿದ್ಯಾಗಿರಿ ಠಾಣೆ ಕ್ರೈಂ ಪಿಎಸ್ಐ ಪ್ರಮೋದ, ಪಿಎಸ್ಐ ಮಲ್ಲಿಗವಾಡ, ಉಪನಗರ ಪೊಲೀಸ್ ಠಾಣೆ ಪಿಎಸ್ಐ ಎಲ್.ಕೆ.ಕೊಡಬಾಳ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿ, ಸಿಬ್ಬಂದಿಗಳು, ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು