ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಮಹಿಳಾ ಪೊಲೀಸ್ ಠಾಣೆಯ ಬಳಿ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
ಜೀವನ್ಮರಣ ಸ್ಥಿತಿಯಲ್ಲಿದ್ದ ಯುವತಿಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾಳೆ.
ಕೊಲೆಯಾದ ಯುವತಿಯನ್ನು ಬಂಟ್ವಾಳ ತಾಲೂಕಿನ ವಿಟ್ಲ ಭಾಗದ ಅಳಿಕೆ ನಿವಾಸಿ ಗೌರಿ(18) ಎಂದು ಗುರುತಿಸಲಾಗಿದೆ. ಆರೋಪಿ ಪದ್ಮರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಯುವಕನು ಗುರುವಾರ ಮಧ್ಯಾಹ್ನ ನಗರದ ಮಹಿಳಾ ಪೊಲೀಸ್ ಠಾಣೆಯ ಬಳಿ ಯುವತಿಯ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆಗೈಯಲು ಯತ್ನ ನಡೆಸಿದ್ದಾನೆ. ಗಾಯಗೊಂಡು ಯುವತಿ ಬಿದ್ದ ಬಳಿಕ ಪರಾರಿಯಾಗಿದ್ದ ಎನ್ನಲಾಗಿದೆ
‘ಅಳಿಕೆ ನಿವಾಸಿ 18 ವರ್ಷದ ಗೌರಿ ಎಂಬ ಯುವತಿಗೆ ಪದ್ಮರಾಜ್ ಎಂಬ ವ್ಯಕ್ತಿ ಚಾಕುವಿನಿಂದ ಇರಿದಿದ್ದಾನೆ. ಪುತ್ತೂರು ಪೇಟೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆʼ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ ತಿಳಿಸಿದ್ದಾರೆ.