ಬಾಗಲಕೋಟೆ: ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಅಜಯ ಕುಮಾರ ಸರನಾಯಕ ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನವನಗರದಲ್ಲಿರುವ ಡಿಸಿಸಿ ಬ್ಯಾಂಕಿನಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
“ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈ ಸಂಬಂಧ ದೆಹಲಿ ಮಟ್ಟದಲ್ಲಿಯೂ ಚರ್ಚೆಯಾಗಿತ್ತು. ಈಗ ಲೋಕಸಭೆ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಪಕ್ಷದ ವರಿಷ್ಠರು, ನಾಯಕರಿಗೆ ಮನವಿ ಮಾಡಿದ್ದೇನೆ. ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು. ನನಗೆ ವಿಶ್ರಾಂತಿ ಬೇಕಿತ್ತು, ಆ ಕಾರಣದಿಂದ ಆಗ ರಾಜಕೀಯ ಬೇಡ ಅಂದಿದ್ದೆ. ಈಗ ಬೇಕು ಅಂತ ಅನಿಸುತ್ತಿದೆ ಅದಕ್ಕೆ ಮತ್ತೊಮ್ಮೆ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ” ಎಂದರು.
“ಬೇರೆ ಪಕ್ಷದಿಂದ ಯಾವುದೇ ಆಹ್ವಾನ ಬಂದಿಲ್ಲ. ನಾನು ಕೂಡಾ ಕದತಟ್ಟಿ ಕೇಳಿಲ್ಲ. ಆದರೆ ಕಾಂಗ್ರೆಸ್?ನಿಂದ ಸ್ಪರ್ಧಿಸಲು ಅತೀವ ಆಸಕ್ತಿ ಹೊಂದಿದ್ದೇನೆ. ಯಾರಿಗೆ ಚುನಾವಣಾ ಎದುರಿಸುವ ಸಾಮರ್ಥ್ಯ, ಕಾರ್ಯಶೀಲತೆ ಇರುತ್ತದೆಯೋ ಅವರಿಗೆ ಟಿಕೆಟ್ ನೀಡುತ್ತಾರೆ ಎಂಬುದು ನನ್ನ ನಂಬಿಕೆ. ಪಕ್ಷದಲ್ಲಿ ಆಕಾಂಕ್ಷೆಗಳಿರುವುದು ಸಹಜ, ಆದರೆ ವರಿಷ್ಠರು ತೀರ್ಮಾನಕ್ಕೆ ಬದ್ಧ” ಎಂದು ಹೇಳಿದರು.
“ಬ್ಯಾಂಕಿನ ಷೇರು ಬಂಡವಾಳ ೧೮೬.೮೯ ಕೋಟಿ ರೂ. ಇದ್ದು, ೨೦೨೩-೨೪ನೇ ಸಾಲಿಗೆ ೨೦೫.೫೮ ಕೋಟಿ ರೂಗೆ ಗುರಿ ನಿಗದಿಪಡಸಲಾಗಿದೆ. ಒಟ್ಟು ನಿಧಿಗಳು ೩೧೧.೮೨ ಕೋಟಿ ರೂ.ಇದ್ದು, ಪ್ರಸಕ್ತ ವರ್ಷ ೩೪೪.೫೩ ಕೋಟಿ ರೂ, ಗುರಿ ನಿಗದಿಪಡಿಸಲಾಗಿದೆ. ಬ್ಯಾಂಕಿನಿಂದ ಪ್ರಸಕ್ತ ವರ್ಷ ೨,೫೯,೦೮೭ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ೧೩೪೬.೪೬ ಕೋಟಿ ರೂ. ಬೆಳೆಸಾಲ ಹಾಗೂ ೧೭೭೮ ರೈತರಿಗೆ ಪ್ರತಿಶತ ೩% ಬಡ್ಡಿದರದಲ್ಲಿ ೧೦೫.೨೫ ಕೋಟಿಯಷ್ಟು ಕೃಷಿ ಚಟುವಟಿಕೆಗಳಾದ ಪೈಪ್‌ಲೈನ್, ಪಂಪ್‌ಸೆಟ್, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಭೂ ಅಭಿವೃದ್ಧಿ ಹಾಗೂ ತೋಟಗಾರಿಕೆ ಬೆಳೆಗಳಾದ ರೇಷ್ಮೆ ಮತ್ತು ಟ್ರ್ಯಾಕ್ಟರ್ ಖರೀದಿ ಉದ್ದೇಶಗಳಿಗೆ ಮಾಧ್ಯಮಿಕ ಕೃಷಿ ಸಾಲ ನೀಡಲಾಗಿದೆ” ಎಂದು ವಿವರಿಸಿದರು.