Sunday, April 20, 2025
Google search engine

Homeಸ್ಥಳೀಯಮೈಸೂರು ಸ್ಟಾರ್ಟಪ್‌ಗಳಿಗೆ ೨೫ ಕೋಟಿ ಫಂಡ್

ಮೈಸೂರು ಸ್ಟಾರ್ಟಪ್‌ಗಳಿಗೆ ೨೫ ಕೋಟಿ ಫಂಡ್

ಮೈಸೂರು: ಬಿಯಾಂಡ್ ಬೆಂಗಳೂರು ಉಪಕ್ರಮದ ಭಾಗವಾಗಿ ಮೈಸೂರು ಕ್ಲಸ್ಟರ್‌ನ ಸ್ಟಾರ್ಟ್ ಅಪ್‌ಗಳಿಗೆ ೨೫ ಕೋಟಿ ರೂ. ಮೊತ್ತದ ಕ್ಲಸ್ಟರ್ ಸೀಡ್ ಫಂಡ್ ಸ್ಥಾಪಿಸಲಾಗಿದೆ.

ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ದುಂಡು ಮೇಜಿನ ಸಭೆಯಲ್ಲಿ ಮೈಸೂರು ಕ್ಲಸ್ಟರ್ ಸೀಡ್ ಫಂಡ್‌ಗಾಗಿ ಉದ್ಯಮಗಳಿಂದ ಕೆಡಿಇಎಂ ಪತ್ರ ಸ್ವೀಕರಿಸಿದೆ. ರಾಜ್ಯ ಸರ್ಕಾರ, ಬ್ಯಾಂಕ್ ಹಾಗೂ ಮೈಸೂರು ಉದ್ಯಮಿಗಳ ಸಹಭಾಗಿತ್ವದಲ್ಲಿ ಸೀಡ್ ಫಂಡ್ ಸ್ಥಾಪಿಸಲಾಗಿದ್ದು, ಮೈಸೂರು ವಲಯದಲ್ಲಿ ಸ್ಟಾರ್ಟ್‌ಅಪ್ ಆರಂಭಿಸುವ ಅರ್ಹ ಉದ್ಯಮಿಗಳಿಗೆ ಈ ಫಂಡ್‌ನಿಂದ ಬಂಡವಾಳ ನಿಧಿ ಒದಗಿಸಲಾಗುತ್ತದೆ. ಇದು ಇಂಥ ಮೊದಲ ಸೆಇಬಿಐ ಸಿಎಟಿ೧ ನಿಧಿಯಾಗಿದ್ದು, ದೇಶದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯ ಗೇಮ್ ಚೇಂಜರ್ ಆಗುವುದರಲ್ಲಿ ಅನುಮಾನವಿಲ್ಲ.

ಕಳೆದ ೨ ವರ್ಷಗಳಲ್ಲಿ ಮೈಸೂರು ಕ್ಲಸ್ಟರ್‌ನ ಉದ್ಯಮ ವ್ಯಾಪಕ ಬೆಳವಣಿಗೆ ಕಂಡಿದ್ದು, ದೇಶದ ಉದಯೋನ್ಮುಖ ಟೆಕ್ ಹಬ್ ಆಗಿ ಬೆಳೆದಿದೆ. ಇದರ ಹಿಂದೆ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಲ್ಲದೇ ನ್ಯಾಸ್ಕಾಂ, ಐಇಎಸ್‌ಎ, ಅಸೋಚಾಮ್, ಸಿಐಐ, ಟಿಐಇ ಮೈಸೂರು- ಇವುಗಳ ಪಾತ್ರ ದೊಡ್ಡದು.

ಕಳೆದ ೧೮ ತಿಂಗಳುಗಳಿಂದೀಚೆಗೆ ಮೈಸೂರಿನಲ್ಲಿ ಐಬಿಎಂ, ಟ್ರಾವಂಕೂರ್ ಅನಾಲಿಟಿಕಾ, ನಾಗರೋ, ಹೆಚ್‌ಹಿಎಸ್, ಪ್ರೊಕ್ಸೆಲೆರಾ, ಫೋರ್‌ಫ್ರಂಟ್ ಹೆಲ್ತ್‌ಕೇರ್, ಗ್ಲೋಟಚ್ ಆಟೋ-ಆಸಮ್ ಮುಂತಾದ ಪ್ರತಿಷ್ಠಿತ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಹಿಂದುಜಾ ಗ್ಲೋಬಲ್ ಸೊಲ್ಯೂಷನ್ಸ್‌ನ ಜಾಗತಿಕ ವಿಸ್ತರಣೆಯ ಭಾಗವಾಗಿ ಮೈಸೂರಿನಲ್ಲಿ ಹೊಸ ಕೇಂದ್ರ ಸ್ಥಾಪಿಸಿದ್ದು, ಮೊದಲ ಹಂತದಲ್ಲಿ ಸಂಸ್ಥೆ ೪೦೦ ಮಂದಿಯನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಯೋಜಿಸಿದೆ.

ಸೇವೆ ಮತ್ತು ಉತ್ಪಾದನೆ ಎರಡನ್ನೂ ಒಳಗೊಂಡಿರುವ ವಲಯಗಳ ಬಲ ಹೆಚ್ಚಿಸುವಲ್ಲಿ ಪ್ರತಿಭಾನ್ವಿತ ಕೆಲಸಗಾರರ ಪಾತ್ರ ಅತ್ಯಂತ ಮುಖ್ಯವಾದುದು. ಇಂಥ ಪ್ರತಿಭಾನ್ವಿತರ ಲಭ್ಯತೆಯಿಂದಾಗಿಯೇ ಮೈಸೂರು ಕ್ಲಸ್ಟರ್ ಈ ಮಟ್ಟದ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತಿದೆ.
ಮೈಸೂರು-ಉದಯೋನ್ಮುಖ ಸ್ಟಾರ್ಟ್‌ಅಪ್ ಹಬ್: ಮೈಸೂರು ಕ್ಲಸ್ಟರ್ ಅನುಕೂಲಕರವಾದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ ಹೊಂದಿದ್ದು, ಇನ್ನೂ ಹೆಚ್ಚಿನ ಹೂಡಿಕೆ ಅವಕಾಶಗಳು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭರವಸೆ ಮೂಡಿಸಿದೆ. ಬಿಯಾಂಡ್ ಬೆಂಗಳೂರು ಸ್ಟಾರ್ಟ್-ಅಪ್ ಗ್ರಿಡ್‌ನಲ್ಲಿ ಮೈಸೂರು ಕ್ಲಸ್ಟರ್ ಒಂದರಲ್ಲೇ ೧೨೦ ಸ್ಟಾರ್ಟ್-ಅಪ್‌ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಪೈಕಿ ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳು ಶೇ.೧೫ರಷ್ಟಿವೆ.

ಐಟಿ ಪಾರ್ಕ್‌ಗಳಾದ ಗ್ಲೋಬಲ್ ಟೆಕ್ನಾಲಜಿ ಸೆಂಟರ್, ರಿನೈಸಾನ್ಸ್ ಐಟಿ ಇನ್‌ಫ್ರಾ ಪಾರ್ಕ್ ಮತ್ತು ಗೋಪಾಲನ್ ಇನ್‌ಫ್ರಾ ಸಹ ಈ ಕ್ಲಸ್ಟರ್‌ನ ಬೆಳವಣಿಗೆಗೆ ಪೂರಕವಾಗಿದ್ದು, ಇವು ಜಿಸಿಸಿಗಳು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಆಕರ್ಷಿಸುತ್ತವೆ. ನ್ಯಾಸ್ಕಾಂನ ಜಿಸಿಸಿ ಸದಸ್ಯರು ಈ ಕ್ಯಾಂಪಸ್‌ಗಳಿಗೆ ಇಂದು ಭೇಟಿ ನೀಡಿದರು.
ಸಭೆಯಲ್ಲಿ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕರೂಪ ಕೌರ್, ಕೆಡಿಇಎಂನ ಸಿಇಓ ಸಂಜೀವ್ ಗುಪ್ತಾ, ಕೆಡಿಇಎಂ ಮೈಸೂರು ಕ್ಲಸ್ಟರ್‌ನ ಸುಧನ್ವ ಧನಂಜಯ, ನ್ಯಾಸ್‌ಕಾಂನ ಪ್ರಾದೇಶಿಕ ಮುಖ್ಯಸ್ಥ ಭಾಸ್ಕರ್ ವರ್ಮಾ ಹಾಗೂ ಉದ್ಯಮದ ಮುಖಂಡರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular