ಪಿರಿಯಾಪಟ್ಟಣ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಾಂಪ್ರದಾಯಕವಾಗಿ ಸಡಗರದಿಂದ ಆಚರಿಸಲಾಯಿತು.
ಮಹಿಳೆಯರು ವಿಶೇಷವಾಗಿ ತಮ್ಮ ಮನೆಗಳ ಮುಂಭಾಗ ರಂಗೋಲಿ ಬಿಡಿಸಿ ತಳಿರು ತೋರಣಗಳಿಂದ ಮನೆಯನ್ನು ಅಲಂಕರಿಸಿ ಲಕ್ಷ್ಮಿದೇವಿ ಕಳಸ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಅಕ್ಕಪಕ್ಕದ ಮನೆ ಮುತ್ತೈದೆಯರಿಗೆ ಕುಂಕುಮ ನೀಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಚಿಣ್ಣರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಉದ್ಯಮಿ ಹಾಗೂ ವರ್ತಕರು ತಮ್ಮ ಅಂಗಡಿಗಳನ್ನು ಸಿಂಗರಿಸಿ ಲಕ್ಷ್ಮಿ ಪೂಜೆ ನೆರವೇರಿಸಿದರು. ಪಟ್ಟಣದ ಶ್ರೀ ಮಸಣಿಕಮ್ಮ ಶ್ರೀ ಕನ್ನಂಬಾಡಿಯಮ್ಮ ಶ್ರೀ ವೈದ್ಯೇಶ್ವರ ಶ್ರೀ ಮಹದೇಶ್ವರ ಶ್ರೀ ಶನೇಶ್ವರ ದೇವಾಲಯ ಸೇರಿದಂತೆ ತಾಲೂಕಿನ ವಿವಿದೆಡೆಯ ದೇವಾಲಯಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮುಂಜಾನೆಯಿಂದಲೇ ವಿಶೇಷ ಪೂಜೆ ಜರುಗಿತು ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಪಟ್ಟಣದ ಶ್ರೀ ಕನ್ನಂಬಾಡಿಯಮ್ಮ ದೇವಾಲಯದಲ್ಲಿ ಅರ್ಚಕರಾದ ವೇಣುಗೋಪಾಲ್ ನೇತೃತ್ವ ವಿಶೇಷ ಪೂಜೆ ಜರುಗಿತು. ಮುಜುರಾಯಿ ಇಲಾಖೆಗೆ ಸೇರಿದ ಶ್ರೀ ಮಸಣಿಕಮ್ಮ ದೇವಾಲಯದಲ್ಲಿ ಅರ್ಚಕರಾದ ಹರೀಶ್ ಅವರ ನೇತೃತ್ವ ಮುಂಜಾನೆಯಿಂದಲೇ ವಿಶೇಷ ಪೂಜೆ ಜರಗಿತು. ಸರ್ಕಾರಿ ಆದೇಶದಂತೆ ಮುಜರಾಯಿ ಇಲಾಖೆ ವತಿಯಿಂದ ತಾಲ್ಲೂಕು ಆಡಳಿತ ನೇತೃತ್ವದಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಅಂದಾಜು 2 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಬಳೆ ಅರಿಶಿಣ ಕುಂಕುಮ ಪ್ರಸಾದ ವಿತರಿಸಲಾಯಿತು.
