ಯಳಂದೂರು: ಪಟ್ಟಣದ ಬಳೇಪೇಟೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ವಹಿಸಲ್ಪಡುತ್ತಿದ್ದ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಮತ್ತು ರಾಗಿ ದುರುಪಯೋಗ ಮಾಡಿಕೊಂಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಅಂಗಡಿಯನ್ನು ಆಹಾರ, ನಾಗರೀಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಯೋಗಾನಂದ ಅಮಾನತ್ತು ಮಾಡಿದ್ದಾರೆ.
ಇಲ್ಲಿ ಅಕ್ಕಿ ದುರುಪಯೋಗವಾಗಿದೆ ಎಂಬುದರ ಬಗ್ಗೆ ಸಾರ್ವಜನಿಕರು ದೂರಿದ್ದರು. ಈ ಬಗ್ಗೆ ಎಚ್ಚೆತ್ತುಕೊಂಡ ಇಲಾಖೆ ತಹಶೀಲ್ದಾರ್ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಆದೇಶಿಸಿತ್ತು. ಇಲ್ಲಿಗೆ ಭೇಟಿ ನೀಡಿದ್ದಾಗ ದರಪಟ್ಟಿಯನ್ನು ಹಾಗೂ ನಾಮಫಲಕವನ್ನು ಪ್ರದರ್ಶಿಸದೆ ಇರುವುದು, ತಪಾಸಣೆ ವಹಿ ನಿರ್ವಹಿಸದಿಲ್ಲದಿರುವುದು. ದಾಸ್ತಾನು ಪುಸ್ತಕವನ್ನು ಕಾಲೋಚಿತಗೊಳಿಸದಿರುವುದು, ನೆಲಹಾಸು ಹಾಕಿಲ್ಲದಿರುವುದು, ಮಳಿಗೆ ಶುಚಿತ್ವದಿಂದ ಇಲ್ಲದಿರುವುದು, ಹಾಗೂ ೨೦೨೩ ರ ಜುಲೈ ಮಾಹೆಯ ಅಂತ್ಯಕ್ಕೆ ನ್ಯಾಯಬೆಲೆ ಅಂಗಡಿಯಲ್ಲಿ ಉಳಿಯಬೇಕಾಗಿದ್ದ ಉಳಿಕೆ ದಾಸ್ತಾನಿನಲ್ಲಿ ೮೦.೦೬ ಕ್ವಿಂಟಾಲ್ ಅಕ್ಕಿ, ೧.೧೮ ಕ್ವಿಂಟಾಲ್ ರಾಗಿ ದುರುಪಯೋಗ ಮಾಡಿಕೊಂಡಿರುವುದು ವರದಿಯಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಅಗತ್ಯ ವಸ್ತುಗಳ ನಿಯಂತ್ರಣ ಆದೇಶವನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಈ ನ್ಯಾಯಬೆಲೆ ಅಂಗಡಿಯನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಆದೇಶಿಸಿದ್ದಾರೆ.
