ಮಂಡ್ಯ: ಆಗಸ್ಟ್ 28 ರಂದು ರಾಜ್ಯ ಮಟ್ಟದ ಸಿರಿಧಾನ್ಯ ಮೇಳ ನಡೆಯುತ್ತಿರುವ ಹಿನ್ನಲೆ ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಸಿರಿಧಾನ್ಯ ನಡಿಗೆಗೆ ಜಿಲ್ಲಾಧಿಕಾರಿ ಡಾ.ಕುಮಾರ್ ಚಾಲನೆ ನೀಡಿದರು.
ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ನಡಿಗೆ ಆಯೋಜಿಸಲಾಗಿದ್ದು, ನಡಿಗೆಯೂ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಈ ವೇಳೆ ಸಿರಿಧಾನ್ಯದ ಮಹತ್ವ ಸಾರುವ ಪ್ಲೇಕಾರ್ಡ್ ಪ್ರದರ್ಶಿಸಲಾಯಿತು.
ಈ ಕುರಿತು ಮಾತನಾಡಿದ ಡಿಸಿ ಡಾ.ಕುಮಾರ್, ರೈತ ಭಾಂದವರಿಗೆ ಸಿರಿಧಾನ್ಯದ ಮಹತ್ವ ತಿಳಿಸಬೇಕು. ಜೊತೆಗೆ ಸಿರಿಧಾನ್ಯಕ್ಕೆ ಹೆಚ್ಚು ಒತ್ತು ಕೊಡಬೇಕು ಎನ್ನುವ ನಿಟ್ಟಿನಲ್ಲಿ ಸಿರಿಧಾನ್ಯ ನಡಿಗೆ ಆಯೋಜನೆ ಮಾಡಲಾಗಿದೆ ಎಂದರು.
ರೈತರಲ್ಲಿ ಸಿರಿಧಾನ್ಯ ಬೆಳೆಯುವ ಸಂಸ್ಕೃತಿ ಹೆಚ್ಚಬೇಕು. ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ರೈತರು ಬೆಳೆದ ಬೆಳೆಗಳ ಉತ್ಪಾದನೆ ಹೆಚ್ಚು ಮಾಡುವುದರ ಜೊತೆಗೆ ಮಾರುಕಟ್ಟೆ ಸೌಲಭ್ಯ ಸಿಗಬೇಕು. ಹೊಸ ತಂತ್ರಜ್ಞಾನದ ಜ್ಞಾನ ಹೆಚ್ಚಾಗಬೇಕು ಎಂಬುದು ಸಿರಿಧಾನ್ಯ ಮೇಳದ ಉದ್ದೇಶವಾಗಿದೆ.
2023 ನ್ನು ಸಿರಿ ಧಾನ್ಯ ವರ್ಷ ಎಂದು ಘೋಷಿಸಲಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ರೈತರಿಗೆ ಉಪಯುಕ್ತ ಮಾಹಿತಿ ನೀಡಲಾಗುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳದ ಸದುಪಯೋಗ ಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಅ.28 ರಂದು ನಗರದ ಡಾ.ರಾಜ್ ಕುಮಾರ್ ಬಡಾವಣೆ ಮೈದಾನದಲ್ಲಿ ಒಂದು ದಿನದ ರಾಜ್ಯ ಮಟ್ಟದ ಸಿರಿಧಾನ್ಯ ಮೇಳ ನಡೆಯಲಿದ್ದು, ಅಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂದು ವಸ್ತು ಪ್ರದರ್ಶನ ಮತ್ತು ಬೆಲ್ಲದ ಪರಿಷೆ ನಡೆಯಲಿದೆ. ಮಾತ್ರವಲ್ಲದೇ ಕಾರ್ಯಕ್ರಮದ ಅಂಗವಾಗಿ ಸಿರಿಧಾನ್ಯ ನಡಿಗೆ, ಸಿರಿಧಾನ್ಯ ಪಾಕ ಸ್ಪರ್ಧೆ, ಚಿಣ್ಣರ ಚಿತ್ರಕಲೆ ಹಾಗೂ ಮಂಡ್ಯದ ಬೆಲ್ಲ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿರುತ್ತದೆ.ಮೇಳದಲ್ಲಿ ಸುಮಾರು 3000 ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದರು.