ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ಬರ ಪರಿಹಾರ ಕ್ರಮ ಕೈಗೊಳ್ಳಲು ಕೇಂದ್ರದ ಮಾರ್ಗಸೂಚಿ ಬದಲಾವಣೆ ಕಾಯದೆ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು. ನಗರದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ರಾಜ್ಯದ ೧೨೦ ರಿಂದ ೧೩೦ ತಾಲ್ಲೂಕುಗಳು ಬರಪೀಡಿತವಾಗಿದೆ ರಾಜ್ಯದ ರೈತರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರವಾಗಿ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಬರ ಪರಿಹಾರ ಮಾರ್ಗಸೂಚಿ ಬದಲಾವಣೆ ಕಾಯಲಾಗುತ್ತಿದೆ ಆದರೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಖುಷಿಯಲ್ಲಿ ತೇಲುತ್ತಿರುವ ಸರ್ಕಾರ ರೈತರ ಸಮಸ್ಯೆ ಕುರಿತು ಚಿಂತಿಸಬೇಕಿದೆ ಎಂದರು.
ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ಅಂಬಾನಿ ಅದಾನಿಗೆ ಹೋಗುತ್ತಿದ್ದ ಹಣವನ್ನು ಹಂಚಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಗೃಹ ಜ್ಯೋತಿ ಯೋಜನೆ ಮೂಲಕ ಜನರಿಗೆ ಟೋಪಿ ಹಾಕಲಾಗುತ್ತಿದ್ದು, ಈಗಾಗಲೇ ಅಘೋಷಿತ ಲೋಡ್ ಶೆಡ್ಡಿಂಗ್‌ಅನ್ನು ಜಾರಿ ಮಾಡಿದ್ದಾರೆ. ರೈತರು ತಮ್ಮ ಕೃಷಿ ಜಮೀನಿನಲ್ಲಿ ವಿದ್ಯುತ್ ಸರಬರಾಜು ಆಗಲಿದೆಯೇ ಎಂದು ಕಾಯುತ್ತಿದ್ದಾರೆ ಎಂದರು.
ಕಾವೇರಿ ನದಿ ನೀರು ಹಂಚಿಕೆಯ ವಿಚಾರವಾಗಿ ಚರ್ಚಿಸಲು ಸರ್ವ ಪಕ್ಷಗಳ ಸಭೆ ಕರೆದಾಗ ನಾನು ಸ್ಪಷ್ಟಪಡಿಸಿದ್ದೇನೆ. ಸರ್ವ ಪಕ್ಷ ಸಭೆ ಕರೆಯದೆ ಸುಪ್ರೀಂಕೋರ್ಟ್‌ಗೆ ತಮಿಳು ನಾಡು ಹಾಕಿದ್ದ ಅರ್ಜಿಯ ವಿಚಾರಣೆ ನಡೆದು ತೀರ್ಪು ಹೊರಬರುವ ಮುನ್ನವೇ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸಿದೆ. ಈ ಬಗ್ಗೆ ಪ್ರಶ್ನಿಸಿದ ರೈತರಿಗೆ ಕೋರ್ಟ್ ಮೆಟ್ಟಿಲು ಹೇರಲು ಹೇಳುತ್ತಿದೆ ಎಂದು ಕಿಡಿಕಾರಿದರು