ತಿರುವನಂತಪುರಂ (ಕೇರಳ): ಚಂದ್ರಯಾನ-೩ರ ವೈಜ್ಞಾನಿಕ ಉದ್ದೇಶಗಳು ಈಡೇರುತ್ತಿವೆ. ಇದಕ್ಕಾಗಿ ಇಸ್ರೋ ವಿಜ್ಞಾನಿಗಳ ತಂಡ ಮುಂದಿನ ೧೩-೧೪ ದಿನಗಳನ್ನು ಬಹಳ ಉತ್ಸುಕತೆಯಿಂದ ಎದುರು ನೋಡುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಖ್ಯಸ್ಥ ಎಸ್. ಸೋಮನಾಥ್ ತಿಳಿಸಿದ್ದಾರೆ.
ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್ ಕಾರ್ಯಪ್ರವೃತ್ತವಾಗಿವೆ. ಮುಂಬರುವ ಎರಡು ವಾರಗಳಲ್ಲಿ ನಾವು ಹೆಚ್ಚಿನ ದತ್ತಾಂಶ ಸಂಗ್ರಹಿಸುತ್ತೇವೆ. ಇದರಿಂದ ವಿಜ್ಞಾನದಲ್ಲಿ ನಿಜವಾಗಿಯೂ ಉತ್ತಮ ಪ್ರಗತಿ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಂದ್ರಯಾನ-೩ ಪ್ರಾಥಮಿಕ ಮೂರು ಉದ್ದೇಶಗಳ ಪೈಕಿ ಎರಡನ್ನು ಸಾಧಿಸಿದೆ. ಮೂರನೇ ಉದ್ದೇಶ ಈಡೇರಿಕೆಗೆ ಚಂದ್ರನ ಮೇಲ್ಮೈಯಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಪೇಲೋಡ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ಮಾಹಿತಿ ಒದಗಿಸಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ: ‘ಯಾವ ವೈಫಲ್ಯವೂ ಅಂತಿಮವಲ್ಲ. ಸಾಧನೆಯ ಹೊಸ ಹೆಜ್ಜೆ ಆರಂಭವಾಗುವುದು ಅಂತಿಮವಾದ ಸ್ಥಳದಿಂದಲೇ’ ಎಂಬಂತೆ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-೩ ರ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿದೆ. ಈ ಸಾಧನೆ ಮಾಡಿದ ನಾಲ್ಕನೇ ದೇಶ ಭಾರತ. ಈ ಹಿಂದೆ ಅಮೆರಿಕ, ರಷ್ಯಾ ಮತ್ತು ಚೀನಾ ಚಂದ್ರನ ಅಂಗಳ ತಲುಪಿದ ಸಾಧನೆ ಮಾಡಿದ್ದವು. ಆದರೆ, ದಕ್ಷಿಣ ಧ್ರುವದಲ್ಲಿ ಅಡಿಯಿಟ್ಟ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.