ನವದೆಹಲಿ: ಐಬಿಎಸ್‌ಎ ವಿಶ್ವ ಕ್ರೀಡಾಕೂಟದಲ್ಲಿ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡವು ಚಿನ್ನದ ಪದಕ ಗೆದ್ದು ಚಾರಿತ್ರಿಕ ಸಾಧನೆ ಮಾಡಿದೆ. ಕರ್ನಾಟಕದ ಆಟಗಾರ್ತಿ ವರ್ಷಾ ಉಮಾಪತಿ ನಾಯಕತ್ವದ ಭಾರತ ತಂಡವು ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ೯ ವಿಕೆಟ್‌ಗಳಿಂದ ಭರ್ಜರಿ ಗೆಲವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ತಂಡವು ೨೦ ಓವರ್‌ಗಳಲ್ಲಿ ೮ ವಿಕೆಟ್‌ಗಳಿಗೆ ೧೧೪ ರನ್ ಗಳಿಸಿತ್ತು.
ಮಳೆ ಕಾರಣ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಗೆಲುವಿಗೆ ೯ ಓವರ್‍ಗೆ ೪೨ ರನ್‌ಗಳ ಗುರಿ ನೀಡಲಾಗಿತ್ತು. ಆದರೆ ಭಾರತ ತಂಡವು ಕೇವಲ ೩.೩ ಓವರ್‌ಗಳಲ್ಲಿ ೪೨ ರನ್ ಬಾರಿಸಿ ಭರ್ಜರಿ ಗೆಲುವು ಸಾಧಿಸಿತು. ವಿಶ್ವ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಅಂಧರ ಕ್ರಿಕೆಟ್ ಆಡಿಸಲಾಗಿತ್ತು. ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಹೊಸ ಇತಿಹಾಸ ಸೃಷ್ಟಿಸಿತು.
ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಅಭಿನಂದನೆ: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಐಬಿಎಸ್‌ಎ ವಿಶ್ವ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ?ಅಂಧರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಚಿನ್ನದ ಪದಕ ಗೆದ್ದ ಭಾರತೀಯ ಮಹಿಳಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! IಃSಂ ವಿಶ್ವ ಕ್ರೀಡಾಕೂಟದಲ್ಲಿ ಅಂಧರ ಕ್ರಿಕೆಟ್‌ನ ಮೊದಲ ಆವೃತ್ತಿಯಲ್ಲಿ ಐತಿಹಾಸಿಕ ಮತ್ತು ಸ್ಪೂರ್ತಿದಾಯಕ ಪ್ರದರ್ಶನಕ್ಕಾಗಿ ರಾಷ್ಟ್ರವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ? ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐಬಿಎಸ್‌ಎ ವಿಶ್ವ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ನಮ್ಮ ಕ್ರೀಡಾಪಟುಗಳ ಅದಮ್ಯ ಸ್ಫೂರ್ತಿ ಮತ್ತು ಪ್ರತಿಭೆಯನ್ನು ಉದಾಹರಿಸುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಇದರಿಂದ ಭಾರತ ಹೆಮ್ಮೆ ಪಡುತ್ತಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.