ರಕ್ಷಿತ್ ಶೆಟ್ಟಿ ಅವರ ಉಳಿದವರು ಕಂಡಂತೆ, ರಾಜ್ ಬಿ ಶೆಟ್ಟಿ ಅವರ ಗರುಡಗಮನ ವೃಷಭವಾಹನ ಸಿನಿಮಾ ನೋಡಿದಾಗ ಮಂಗಳೂರು ಕರಾವಳಿ ತೀರದ ಒಂದಿಷ್ಟು ಗಟ್ಟಿ ಕಥೆಗಳು ತೆರೆಯ ಮೇಲೆ ಬಂದು ನಮ್ಮನ್ನು ಕಾಡುತ್ತಲೇ ಇರುತ್ತವೆ. ಈಗ ವರುಣ್ ಕಟ್ಟಿಮನಿ ಅವರ ಉತ್ತರ ಕರ್ನಾಟಕದ ಪಕ್ಕಾ ಜವಾರಿ ಕಥೆಯುಳ್ಳ ಬಯಲುಸೀಮೆ ಸಿನಿಮಾ ಕೂಡಾ ನಮ್ಮನ್ನು ಕಾಡುತ್ತಿದೆ.
ಉತ್ತರ ಕರ್ನಾಟಕದ ಒಡಲಾಳದಲ್ಲಿ ಅಡಗಿದ ಸಂವೇದನೆ, ಮುಗ್ದತೆ, ರಾಜಕೀಯ ಸ್ವಾರ್ಥ, ದ್ವೇಷ, ಊರೊಳಗೆ ನಡೆಯುತ್ತಿರುವ ಕಾನೂನು ಬಾಹೀರ ಕೆಲಸ ಹೀಗೆ ಇವೆಲ್ಲಗಳ ಮಧ್ಯೆಯೂ ನಿಯತ್ತು, ನಂಬಿಕೆಯಿಂದ ಬದುಕುತ್ತಿರುವ ಮುಗ್ದ ಜನರು. ಈ ಮುಗ್ದ ಜನರನ್ನೇ ಬಳಸಿಕೊಂಡು ತನ್ನ ಬೆಳೆ ಬೇಯಿಸಿಕೊಳ್ಳುವಂಥ ರಾಜಕೀಯ ನಾಯಕರು.
ಹೀಗೆ ಸಮಾಜದಲ್ಲಿ ಅದ್ರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಬಯಲುಸೀಮೆ ಎನಿಸಿಕೊಂಡು ಗಜೇಂದ್ರಗಡ, ಇಳಕಲ್ ಬನಶಂಕರಿ ಹಾಗೂ ಇತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಾಗ ನಮ್ಮ ಕಣ್ಣ ಮುಂದೆ ನಡೆಯುತ್ತಲೇ ಇರುವ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡ ವರುಣ್ ಕಟ್ಟಿಮನಿ ಅವರು ಒಂದೊಳ್ಳೆ ಕಥಾ ಹಂದರದ ಮೂಲಕ ಬಯಲುಸೀಮೆ ಸಿನಿಮಾವನ್ನು ನಮ್ಮುಂದೆ ತಂದಿದ್ದಾರೆ.
ಉತ್ತರ ಕರ್ನಾಟಕದ ಬಯಲುಸೀಮೆಯ ಊರುಗಳ ಪಕ್ಕಾ ಜವಾರಿ ಭಾಷೆಯ ಸೊಗಡು ಇಡೀ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಬಯಲುಸೀಮೆಗಳಲ್ಲಿನ ದುಡ್ಡಿದ್ದವರ ದರ್ಬಾರು, ಇಲ್ಲದವರ ಅಸಹಾಯಕತೆ, ಪ್ರೇಮ – ಸಲ್ಲಾಪದ ತುಂಟತನಗಳು, ಕಾಲೇಜು ಆವರಣದಲ್ಲಿನ ಚಿಗರೊಡೆಯುವ ಪ್ರೀತಿ, ರಾಜಕೀಯ ದೊಂಬರಾಟಗಳು, ದ್ವೇಷದ ಬೆಂಕಿಯಲ್ಲಿ ಸುಟ್ಟು ಕರಕಲಾಗುವ ಮನುಷ್ಯರು ಹೀಗೆ ಎಲ್ಲವನ್ನೂ ಬರೊಬ್ಬರಿ ಎರಡೂವರೆ ಗಂಟೆಯಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವರುಣ್ ಕಟ್ಟಿಮನಿ . ನಿರ್ದೇಶನದ ಜೊತೆಗೆ ಮುಖ್ಯ ಪಾತ್ರದಲ್ಲೂ ನಟಿಸಿದ ವರುಣ್ ಕಟ್ಟಿಮನಿ ಸೈ ಎನ್ನಿಸಿಕೊಂಡಿದ್ದಾರೆ. ಸಿನಿಮಾ ಪೂರ್ಣ ನೋಡಿ ಎದ್ದು ಹೊರಟಾಗ ನಿಮಗೆ ಕರಾವಳಿಯ ಉಳಿವರು ಕಂಡಂತೆ ಹಾಗೂ ಹಿಂದಿಯ ಗ್ಯಾಂಗ್ಸ್ ಆಫ್ ವಾಸೇಪುರ ಸಿನಿಮಾಗಳು ನೆನಪಿಗೆ ಬರುತ್ತವೆ. ಅಂದ್ರೆ ನಿರ್ದೇಶಕರು ಉತ್ತರ ಕರ್ನಾಟಕದ ಪಕ್ಕಾ ಜವಾರಿ ಕಥೆಗಳನ್ನು ಒಂದಿಷ್ಟು ಸೇರಿಸಿ ತೆರೆಯ ಮೇಲೆ ತಂದಿದ್ದಾರೆ
ಇನ್ನೂ ತೆರೆಯ ಮೇಲೆ ನಾಗಾಭರಣ್, ರವಿಶಂಕರ್, ಯಶ್ ಶೆಟ್ಟಿ, ಕಾಮಿಡಿ ಕಿಲಾಡಿ ದಾನಪ್ಪ, ಸಂಯುಕ್ತಾ ಹೊರನಾಡು, ಲಕ್ಷ್ಮೀ ನಾಡಗೌಡ್ ಹಾಗೂ ಸಂತೋಷ ಉಪ್ಪಿನ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಅರ್ಥಪೂರ್ಣವಾಗಿದೆ. ಕಥೆಗೆ ತಕ್ಕ ಸಂಗೀತ ನೀಡುವ ಮೂಲಕ ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಗೆದ್ದಿದ್ದಾರೆ. ಸಿನಿಮಾಕ್ಕೆ ಸುಜಯ್ಕುಮಾರ್ ಬಾವಿಕಟ್ಟಿ ಅವರ ಛಾಯಾಗ್ರಹಣ ಮೆರುಗು ತಂದಿದೆ. ತಾಂತ್ರಿಕವಾಗಿ ಇನ್ನೂ ಗಟ್ಟಿತನವಿದ್ದಿದ್ದರೆ ತೆರೆಯ ಮೇಲೆ ಮತ್ತೊಂದಿಷ್ಟು ರಂಜಿಸಬಹುದಿತ್ತು.
ಕಥೆ ಬಯಲುಸೀಮೆಯದ್ದು ಆದರೂ ಪ್ರತಿಯೊಬ್ಬರೂ ನೋಡಲೇಬೇಕಾದ ಕಥೆಯಿದು. ಮಿಸ್ ಮಾಡ್ದೇ ನೋಡಿ.. ಪ್ರೋತ್ಸಾಹಿಸಿ… ಮತ್ತೊಂದಿಷ್ಟು ಬಯಲುಸೀಮೆ ಅಪ್ಪಟ ಕಥೆಗಳು ತೆರೆಗೆ ಬಂದರೂ ಬರಬಹುದು
ರವೀಂದ್ರ ಮುದ್ದಿ