ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಆ.೨೮) ತವರು ಜಿಲ್ಲೆ ಮೈಸೂರಿಗೆ ತೆರಳಿದ್ದು, ಮೂರು ದಿನಗಳ ಕಾಲ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಸ್ತುವಾರಿ ಸಚಿವರು, ಶಾಸಕರು, ಸಂಸದ ಮತ್ತು ಅಧಿಕಾರಿಗಳೊಂದಿಗೆ ಕೆಡಿಪಿ ಸಭೆ ನಡೆಸಿದರು.
ಸಭೆಯಲ್ಲಿ ಯಾವ ರೈತರು ಕೂಡ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲ್ಲ. ಏನೋ ಕಷ್ಟದಲ್ಲಿ ಆತುರದ ನಿರ್ಧಾರಕ್ಕೆ ಬಂದಿರುತ್ತಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ತಕ್ಷಣ ಪರಿಹಾರ ಕೊಡಿ. ರೈತರ ಆತ್ಮಹತ್ಯೆ ಪ್ರಕರಣದಲ್ಲಿ ತಡ ಮಾಡಬೇಡಿ. ದುಡ್ಡು ಕೊಡುವುದು ಸರ್ಕಾರ ಅಲ್ಲ ನಾವು. ದಸರಾ ಇದೆ ಅಂತ ನೆಪ ಹೇಳಿಕೊಂಡು ರೈತರ ಕೆಲಸ ಮರೆಯಬೇಡಿ. ಪರಿಹಾರ ಕೊಟ್ಟು ಸುಮ್ಮನಾಗಬೇಡಿ, ಆತ್ಮಹತ್ಯೆಗೆ ಕಾರಣ ತಿಳಿದುಕೊಳ್ಳಿ. ರೈತರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಮೈಸೂರು ಜಿಲ್ಲೆಯಲ್ಲಿ ಬರ ಘೋಷಣೆ ಮಾಡುವ ಸ್ಥಿತಿ ಇದ್ಯಾ ಕೃಷಿ ಅಧಿಕಾರಿಗಳು ಹಳ್ಳಿಗಳಿಗೆ ಹೋಗಬೇಕು. ಆಫೀಸ್‌ನಲ್ಲೆ ಕೂತು ಕೆಲಸ ಮಾಡಬೇಡಿ. ರೈತರ ಜೊತೆ ಗೌರವಯುತವಾಗಿ ನಡೆದುಕೊಳ್ಳಿ. ರೈತರ ಸಂಪರ್ಕ ಕೇಂದ್ರ ಇರುವುದು ಯಾಕೆ ರೈತರು ಕೃಷಿ ಅಧಿಕಾರಿಗಳಿಗಿಂತ ಬುದ್ದಿವಂತರು. ಕೃಷಿ ವಿಶ್ವವಿದ್ಯಾಲಯದಲ್ಲಿ ಓದಿದ ಮಾತ್ರಕ್ಕೆ ಅಧಿಕಾರಿಗಳು ಬುದ್ದಿವಂತರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಎಷ್ಟು ವರ್ಷದಿಂದ ಮೈಸೂರಿನಲ್ಲಿ ಇದ್ದೀಯಾ ಎಂದು ಸಿಎಂ ಸಿದ್ದರಾಮಯ್ಯ ಕೃಷಿ ಅಧಿಕಾರಿಗೆ ಕೇಳಿದರು. ಒಂದು ವರ್ಷದಿಂದ ಇದ್ದೇನೆ ಎಂದು ಕೃಷಿ ಅಧಿಕಾರಿ ಹೇಳಿದರು. ಹಾಗಿದ್ದರೇ ನೀವು ಎಷ್ಟು ಗ್ರಾಮಗಳಿಗೆ ಭೇಟಿ ಕೊಟ್ಟಿದ್ದೀರಾ ಎಷ್ಟು ರೈತರನ್ನು ಭೇಟಿ ಮಾಡಿದ್ದೀರಾ ಪರ್ಯಾಯ ಬೆಳೆಗೆ ಸೂಚನೆ ನೀಡಿದ್ದೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಅಧಿಕಾರಿ ೧೨೦೦ ಹಳ್ಳಿಗಳಿವೆ ೧೨೦ ಹಳ್ಳಿಗಳ ಭೇಟಿ ಮಾಡಿರುವುದಾಗಿ ಹೇಳಿದರು. ಶೇ ೧೦ ಪರ್ಸೆಂಟ್ ಮಾತ್ರ ಮಾಡಿದ್ದೀಯಾ ಊರಿನ ಹೆಸರು ಹೇಳು ನೊಡೋಣಾ ಎಂದು. ಈ ವೇಳೆ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್ ಹೆಸರು ಹೇಳಲು ಪರದಾಡಿದರು.