ನಂಜನಗೂಡು: ಖಾಯಂ ನೌಕರಿ ನೀಡುವುದಾಗಿ ಹೇಳಿ ಕಡಿಮೆ ಸಂಬಳಕ್ಕೆ ೨೦ ವರ್ಷಗಳಿಗೂ ಹೆಚ್ಚು ಕಾಲ ದುಡಿಸಿಕೊಂಡು ಖಾಯಂ ನೌಕರಿಯನ್ನು ನೀಡದೆ, ನಮಗೆ ನ್ಯಾಯಯುತವಾಗಿ ಬರಬೇಕಾಗಿರುವ ಪರಿಹಾರದ ಹಣವನ್ನು ಕೊಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ನಗರದ ಕಲ್ಲಹಳ್ಳಿ ಕ್ಗೈಗಾರಿಕಾ ಪ್ರದೇಶದಲ್ಲಿರುವ ನ್ಯೂ ಹಾರಿಜೆನ್ ಕಾರ್ಖಾನೆ ಗೇಟ್ ಮುಂಭಾಗ ಇಬ್ಬರು ಕಾರ್ಮಿಕರು ಪೆಟ್ರೋಲ್ ತುಂಬಿರುವ ಬಾಟಲ್ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿ ಪ್ರತಿಭಟನೆ ನಡೆಸಿರುವ ಘಟನೆ ಜರುಗಿದೆ.
ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಉದ್ರಿಕ್ತ ಕಾರ್ಮಿಕರನ್ನು ಸಂತೈಸಿ ಕಳುಹಿಸಿದರು.
ನ್ಯೂ ಹಾರಿಜೆನ್ ಕಾರ್ಖಾನೆಯಲ್ಲಿ ದಿನಗೂಲಿ ಆಧಾರದ ಮೇಲೆ ದುಡಿದಿದ್ದ ಕಾರ್ಮಿಕರಾದ ಸುರೇಶ ಮತ್ತು ನಾಗಣ್ಣ ಎಂಬುವರು ಸೋಮವಾರ ಕಾರ್ಖಾನೆ ಮುಂಭಾಗ ಪೆಟ್ರೋಲ್ ಬಾಟಲ್ ಹಿಡಿದುಕೊಂಡು ನಮ್ಮನ್ನು ಖಾಯಂ ನೌಕರಿ ನೀಡುವುದಾಗಿ ಹೇಳಿ ಕಡಿಮೆ ಸಂಬಳಕ್ಕೆ ೨೦ ವರ್ಷಗಳಿಗೂ ಹೆಚ್ಚು ಕಾಲ ದುಡಿಸಿಕೊಂಡು ಕಳೆದ 5 ತಿಂಗಳ ಹಿಂದೆ ಖಾಯಂ ಉದ್ಯೋಗ ನೀಡಲು ಸಾಧ್ಯವಿಲ್ಲ, ನೀವು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿ ಇಲ್ಲವಾದಲ್ಲಿ ಪರಿಹಾರ ಪಡೆದು ಕೆಲಸ ಬಿಟ್ಟು ತೆರಳಿ ಎಂದು ಕಾರ್ಖಾನೆ ಆಡಳಿತ ಮಂಡಳಿ ತಿಳಿಸಿದ ಪರಿಣಾಮ ನಾವು ಖಾಯಂ ಉದ್ಯೋಗ ಬಿಟ್ಟು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಇಷ್ಟವಿಲ್ಲ.
ಆದ್ದರಿಂದ ನಮಗೆ ಪರಿಹಾರ ನೀಡಿ ಎಂದು ಮನವಿ ಪತ್ರವನ್ನು ಸಹ ಬರೆದು ಕೊಟ್ಟಿದ್ದೇವೆ. ಆದರೂ ಸಹ ಕಳೆದ ಐದು ತಿಂಗಳಿಂದ ಕೆಲಸವನ್ನು ನೀಡದೆ ನಮಗೆ ನ್ಯಾಯಯುತವಾಗಿ ಬರಬೇಕಿರುವ ಬಾಕಿ ಸವಲತ್ತುಗಳನ್ನು ಕೊಡದಂತೆ ತಡೆಯೊಡ್ಡಲಾಗಿದೆ. ನಮಗೆ ನ್ಯಾಯ ಒದಗಿಸಿಕೊಡುವಂತೆ ಸ್ಥಳೀಯ ಶಾಸಕ ದರ್ಶನ್ ಧೃವನಾರಾಯಣ್ ಅವರಿಗೂ ಮನವಿ ನೀಡಲಾಗಿದ್ದು ಈಗಲಾದರೂ ಕಾರ್ಖಾನೆಯವರು ನಮಗೆ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾಗುವುದಾಗಿ ಬೆದರಿಕೆಯೊಡ್ಡಿದರು.
ಕಾರ್ಖಾನೆ ಮುಂಭಾಗ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರು ಸಹ ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ ವಹಿಸಿತ್ತು. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾ ನಿರತ ಕಾರ್ಮಿಕರು ಮೈ ಮೇಲೆ ಪೆಟ್ರೋಲ್ ಸುರಿದುಕೊಳ್ಳಲು ಮುಂದಾದರು ಈ ವೇಳೆ ಸ್ಥಳದಲ್ಲಿದ್ದ ಕಾರ್ಖಾನೆ ಭದ್ರತಾ ಸಿಬ್ಬಂದಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ನೌಕರರನ್ನು ಸಂತೈಸಿ ಕಳುಹಿಸಿಕೊಟ್ಟರು. ಈ ಸಂಬಂಧ ಯಾವುದೇ ಪೊಲೀಸ್ ದೂರು ದಾಖಲಾಗಿರುವುದಿಲ್ಲ.