ಗದಗ: ಗದಗ ತಾಲೂಕಿನ ಬಳಗಾನೂರು ಗ್ರಾಮದ ಸಲೀಮಾ ಮೆಹಬೂಬಸಾಬ ಮುದೆಪ್ಪನವರ ಗರ್ಭಿಣಿ ಮಹಿಳೆ ದಾರಿ ಮಧ್ಯೆ 108 ಆ್ಯಂಬುಲೆನ್ಸ್ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ.
ಇಂದು ಬೆಳಿಗ್ಗೆ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಆ್ಯಂಬುಲೆನ್ಸ್ ಗ್ರಾಮಕ್ಕೆ ತೆರಳಿದ್ದು, ಗರ್ಭಿಣಿ ಮಹಿಳೆಯನ್ನ ಆಸ್ಪತ್ರೆಗೆ ಕರೆತರುವಾಗ ಹೆರಿಗೆ ನೋವು ಹೆಚ್ಚಾಗಿದೆ.
ತಕ್ಷಣ ಎಚ್ಚೆತ್ತ ಆ್ಯಂಬುಲೆನ್ಸ್ ಸಿಬ್ಬಂದಿ ಸಮಯಪ್ರಜ್ಞೆಯಿಂದಾಗಿ ಆಸ್ಪತ್ರೆ ತಲುಪುವುದಕ್ಕಿಂತ ಮುಂಚೆಯೇ ಸಮಯೋಚಿತ ಚಿಕಿತ್ಸೆ ನೀಡುವ ಮೂಲಕ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ.
ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದು, ಗದಗ ನಗರದ ದಂಡಪ್ಪ ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಿಬ್ಬಂದಿಗಳಾದ ನರ್ಸಿಂಗ್ ಆಫೀಸರ್ ರವಿ ಬಡಿಗೇರ ಹಾಗೂ ಆ್ಯಂಬುಲೆನ್ಸ್ ಚಾಲಕ ದಸ್ತಗೀರಸಾಬ ಸಮಯಪ್ರಜ್ಞೆಗೆ ಕುಟುಂಬಸ್ಥರು ಮೆಚ್ಚುಗೆ ಸೂಚಿಸಿದ್ದಾರೆ.