ಬೆಂಗಳೂರು: ಅತ್ತ ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದ್ದು ಇತ್ತ ಬೆಂಗಳೂರಿನ ೧೯೮ ವಾರ್ಡ್‌ಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅದ್ದೂರಿ ಸ್ವಾಗತ ದೊರೆತಿದೆ. ಜೊತೆಗೆ ಮತ್ತೊಂದು ಇಂಟ್ರಸ್ಟಿಂಗ್ ಅಂದ್ರೆ, ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ತಮ್ಮ ಕ್ಷೇತ್ರದಲ್ಲಿ ಗೃಹಲಕ್ಷ್ಮೀ ಹಬ್ಬ ಆಚರಿಸಿದ್ದಾರೆ.
ಬಿಜೆಪಿ ವಿರುದ್ಧ ಗುಡುಗುತ್ತಲೇ ಕಾಂಗ್ರೆಸ್ ಕಡೆ ಒಲವು ತೋರಿರುವ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಇವತ್ತು ಗೃಹಲಕ್ಷ್ಮೀ ಯೋಜನೆಯನ್ನ ತಮ್ಮ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಜಾರಿಗೊಳಿಸಿರುವುದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ. ಇದರ ಮಧ್ಯೆಯೇ ಸೋಮಶೇಖರ್ ಲವಲವಿಕೆಯಿಂದ ಗೃಹಲಕ್ಷ್ಮೀ ಯೋಜನೆ ಚಾಲನೆ ನೀಡಿರುವುದು ಬಿಜೆಪಿಗೆ ಇರುಸುಮುರುಸು ಉಂಟುಮಾಡಿದಂತಾಗಿದೆ. ಅಲ್ಲದೇ ಬಿಜೆಪಿ ಬಿಡಲ್ಲ ಎಂದು ಹೇಳುತ್ತಲೇ ಮಾನಸಿಕವಾಗಿ ಕಾಂಗ್ರೆಸ್ ಸೇರಿದ್ದಾರಾ ಎನ್ನು ಪ್ರಶ್ನೆಗಳು, ಚರ್ಚೆಗಳು ಶುರುವಾಗಿವೆ.
ಮೊನ್ನೆಯಷ್ಟೇ ಗೃಹಲಕ್ಷ್ಮೀ ಯೋಜನೆ ಸಂಬಂಧ ಪೂರ್ವಭಾವಿ ಸಭೆ ನಡೆಸಿದ್ದ ಸೋಮಶೇಖರ್, ಯಶಸ್ವಿಗಾಗಿ ಕ್ಷೇತ್ರದಲ್ಲಿ ತಯಾರಿ ನಡೆಸಿದ್ದರು. ಅದರಂತೆ ಇವತ್ತು ಅತ್ತ ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ ಯಶವಂತಪುರ ಕ್ಷೇತ್ರದಲ್ಲೂ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಯ್ತು. ಕಾರ್ಯಕ್ರಮಗಳ ವೀಕ್ಷಣೆಗೆ ಎಲ್‌ಇಡಿ ಪರದಗಳನ್ನ ಅಳವಡಿಸಲಾಗಿತ್ತು. ಈ ಮೂಲಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ, ಪಂಚ ಗ್ಯಾರಂಟಿಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯನ್ನ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಭರ್ಜರಿಯಾಗಿ ಜಾರಿಗೊಳಿಸಿರುವುದು ವಿಶೇಷ.
ಗೃಹಲಕ್ಷ್ಮೀ ಯೋಜನೆ ಜಾರಿಗೆ ನನ್ನದು ಕೂಡಾ ಒಂದು ಅಳಿಲು ಸೇವೆ ಇದೆ. ನನ್ನ ಕ್ಷೇತ್ರದಲ್ಲೂ ಯೋಜನೆ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದ್ದೇನೆ ಎಂದು ಯಶವಂತಪುರ ಕ್ಷೇತ್ರದಲ್ಲಿ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮದಲ್ಲಿ ಎಸ್.ಟಿ.ಸೋಮಶೇಖರ್ ಹೇಳಿದರು.
ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಬೊಮ್ಮಾಯಿ ದೊಡ್ಡವರು. ಏನುಬೇಕಾದರೂ ಮಾತಾಡಲಿ. ಇದು ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಇದು ಸರ್ಕಾರದ ಯೋಜನೆ, ಮಹಿಳೆಯರಿಗೆ ೨ ಸಾವಿರ ರೂ. ಸಿಗುತ್ತದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಯಾವುದೇ ನ್ಯೂನತೆ ನನಗೆ ಕಾಣುತ್ತಿಲ್ಲ. ಸರ್ಕಾರದ ಯೋಜನೆ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಿದ್ದೇನೆ. ಯೋಜನೆ ಜನರಿಗೆ ತಲುಪಿಸಲು ಏನು ಬೇಕೋ ಅದನ್ನು ಮಾಡಿರುವೆ ಎಂದು ಸ್ವಪಕ್ಷದ ನಾಯಕರಿಗೆ ಟಾಂಗ್ ಕೊಟ್ಟರು.