Monday, April 21, 2025
Google search engine

Homeರಾಜ್ಯಸುದ್ದಿಜಾಲಗೃಹಲಕ್ಷ್ಮೀ ಯೋಜನೆಗೆ ಚಾಲನೆ : ಜಿಲ್ಲೆಯಲ್ಲಿ 3.54 ಲಕ್ಷ ನೋಂದಣಿ

ಗೃಹಲಕ್ಷ್ಮೀ ಯೋಜನೆಗೆ ಚಾಲನೆ : ಜಿಲ್ಲೆಯಲ್ಲಿ 3.54 ಲಕ್ಷ ನೋಂದಣಿ

ಚಿತ್ರದುರ್ಗ: ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸರ್ಕಾರ ಅತಿದೊಡ್ಡ ಖಾತ್ರಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದೆ. ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಸದಾ ಬದ್ಧವಾಗಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಬುಧವಾರ ನಗರದ ತರಾಸು ರಂಗಮಂದಿರಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಮೈಸೂರಿನಲ್ಲಿ ನಡೆದ ಗೃಹಲಕ್ಷ್ಮೀ ಯೋಜನೆಯ ಚಾಲನಾ ಕಾರ್ಯಕ್ರಮದ ನೇರ ಪ್ರಸಾರ ಹಾಗೂ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ, ಅವರು ಮಾತನಾಡಿದರು.

ಈ ಹಿಂದೆ ಜಾರಿಗೊಳಿಸಿದ, ಮಹಿಳೆಯರು ಉಚಿತವಾಗಿ ಬಸ್‍ಗಳಲ್ಲಿ ಪ್ರಯಾಣಿಸುವ “ಶಕ್ತಿ” ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದೆ. ಮಹಿಳೆಯರ ಬಸ್ ಪ್ರಯಾಣದಿಂದಾಗಿ ಸದಾ ನಷ್ಟದಿಂದ ಬಳಲುತ್ತಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಲಾಭದತ್ತ ಮುಖ ಮಾಡಲು ಯೋಜನೆ ಕಾರಣವಾಗಿದೆ. ಇದೀಗ ನಮ್ಮ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಮಹಿಳೆಯರ ಸಬಲೀಕರಣಕ್ಕೆ ಈ ಯೋಜನೆ ಪೂರಕವಾಗಿದೆ. ಗೃಹಲಕ್ಷ್ಮೀ ಯೋಜನೆ ನೊಂದಣಿಗೆ ಯಾವುದೇ ಕಾಲಮಿತಿ ಇಲ್ಲ. ಅರ್ಹರು ಈಗಲೂ ಅರ್ಜಿ ಸಲ್ಲಿಸುವುದರ ಮೂಲಕ ಯೋಜನೆಯ ಲಾಭ ಪಡೆಯಲು ನೋಂದಾಯಿಸಿಕೊಳ್ಳಬಹುದು. ಈ ಹಿಂದೆ 2014 ರಿಂದ 2018 ವರೆಗೆ ಅಧಿಕಾರ ನಡೆಸಿದ ನಮ್ಮ ಪಕ್ಷದ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ 168 ಭರವಸೆಗಳನ್ನು ಈಡೇರಿಸಿದ್ದು ಮಾತ್ರವಲ್ಲದೆ, ಇನ್ನೂ ಹಲವಾರು ಯೋಜನೆ ಜಾರಿಗೊಳಿಸಿತ್ತು. ಈ ಬಾರಿಯೂ ಪ್ರಣಾಳಿಕೆಯಲ್ಲಿ ನೀಡಿದ ಅಷ್ಟು ಭರವಸೆಗಳನ್ನು ಈಡೇರಿಸಲಾಗುವುದು. ಈಗಾಗಲೆ ನಾವು ನೀಡಿದ ಗ್ಯಾರಂಟಿ ಭರವಸೆಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರ ಕಲ್ಯಾಣಕ್ಕೆ ನೆರವಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಗೃಹಲಕ್ಷ್ಮೀ ಯೋಜನೆಯಡಿ ರಾಜ್ಯದ 1.10 ಕೋಟಿ ಕುಟುಂಬಗಳ ಯಜಮಾನಿಗೆ ಪ್ರತಿ ತಿಂಗಳು ರೂ.2000 ನೇರವಾಗಿ ಖಾತೆ ಜಮೆ ಮಾಡಲಾಗುವುದು. ಜಿಲ್ಲೆಯಲ್ಲಿ ಖಾತ್ರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಮಹಿಳೆಯರು ಇದರ ಲಾಭಗಳನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಗೃಹಲಕ್ಷ್ಮೀ ಯೋಜನೆಯಡಿ ಸುಧಾ ಸಿ.ಕೆ. ಪುರ, ಮಂಜುಳಾ ಗಾರೆಹಟ್ಟಿ, ನಸ್ರಿನ್ ತಾಜ್ ಚಿತ್ರದುರ್ಗ, ಪಾಲಮ್ಮ ಸಿ.ಕೆ. ಪುರ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮಂಜೂರಾತಿ ಆದೇಶ ಪತ್ರ ವಿತರಿಸಿದರು.

ಜಿಲ್ಲೆಯಾದ್ಯಂತ ಗೃಹಲಕ್ಷ್ಮೀ ಯೋಜನೆ ನೇರ ಪ್ರಸಾರ ವ್ಯವಸ್ಥೆ: ಸರ್ಕಾರದ ಮಹತ್ವಾಂಕ್ಷೆ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ಚಾಲನೆ ಕಾರ್ಯಕ್ರಮ ವೀಕ್ಷಿಸಲು ಜಿಲ್ಲೆಯಾದ್ಯಂತ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯತಿ ಸಿಇಒ ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮರ್ ಮೀನಾ, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕಿ ಭಾರತಿ.ಆರ್.ಬಣಕಾರ್ ಸೇರಿದಂತೆ ನಗರಸಭಾ ಸದಸ್ಯರುಗಳು ಹಾಗೂ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ಇದ್ದರು.

ಕಾರ್ಯಕ್ರಮ ಬಳಿಕ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಅವರು, ಗೃಹ ಲಕ್ಷ್ಮೀ ಯೋಜನೆ ಚಾಲನೆಗೊಂಡ ಮೊದಲ ದಿನವೇ ಜಿಲ್ಲೆಯ 1,20,403 ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ. ಜಮಾ ಆಗಿದೆ, ಉಳಿದ ಎಲ್ಲ ಅರ್ಹ ಫಲಾನುಭವಿಗಳಿಗೂ ಹಂತ ಹಂತವಾಗಿ ಹಣ ಜಮಾ ಆಗಲಿದೆ ಎಂದರು.

RELATED ARTICLES
- Advertisment -
Google search engine

Most Popular