ಬಳ್ಳಾರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಚಾಲನೆ ನೀಡಿದರು.
‘ನಾನೇ ಯಜಮಾನಿ.ನಾನೇ ಗೃಹ ಲಕ್ಷ್ಮಿ’ ಎಂಬ ಆಶಯದೊಂದಿಗೆ ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮವನ್ನು ನಾಗೇಂದ್ರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರುಗಳು, ನಮ್ಮ ಐದು ಗ್ಯಾರಂಟಿಗಳ ಬಗ್ಗೆ ಲೇವಡಿ ಮಾಡಿ ಮಾತನಾಡುತ್ತಿದ್ದರು. ಅದಕ್ಕೆ ಉತ್ತರ ಇಂದು ಗೃಹಲಕ್ಷ್ಮಿ ಯೋಜನೆ ಮೂಲಕವೇ ನೀಡಿದಂತಾಗಿದೆ. ಮಹಿಳೆಯರಿಗೆ 2 ಸಾವಿರ ಇಂದೇ ಖಾತೆಗೆ ವರ್ಗಾವಣೆಯಾಗಲಿದ್ದು. ನಮ್ಮ ಗ್ಯಾರಂಟಿ ಬಗ್ಗೆ ವಿರೋಧಿಗಳು ಸಾಧ್ಯವಾಗದು ಎಂದು ಮಾತನಾಡುತ್ತಿದ್ದವರು ಮುಂದಿನ ದಿನಗಳಲ್ಲಿ ಕಾಣದಂತೆ ಹೋಗುವರು ಎಂದು ಹೇಳುವ ಮೂಲಕ ವಿಪಕ್ಷದವರಿಗೆ ಟಾಂಗ್ ನೀಡಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಭರತ್ ರೆಡ್ಡಿ ಮಾತನಾಡಿ. ಗೃಹಲಕ್ಷ್ಮಿ ಯೋಜನೆ ನೊಂದಣೆಯಲ್ಲಿ ಈ ವರೆಗೆ 2ಲಕ್ಷ 76 ಸಾವಿರ ಮಹಿಳೆಯರು ನೊಂದಾವಣೆ ಮಾಡಿಕೊಂಡಿದ್ದು, ರಾಜ್ಯದಲ್ಲೆ 5ನೇ ಸ್ಥಾನದಲ್ಲಿದೆ. 80 ಸಾವಿರ ಮಹಿಳೆಯರ ಖಾತೆಗೆ ಇಂದೇ ಹಣ ಜಮಾ ಆಗಲಿದೆ ಎಂದರು.
ನಮ್ಮ ಕಾಂಗ್ರೆಸ್ ಪಕ್ಷದಿಂದ ಜಾರಿಯಾಗುತ್ತಿರುವ ಗ್ಯಾರಂಟಿ ಯೋಜನೆ ಜಾರಿಗಳ ಹೊಡೆತಕ್ಕೆ ದೇಶದ ಪ್ರಧಾನಿ ಮೋದಿ ಗ್ಯಾಸ್ ಬೆಲೆ ಕಡಿಮೆ ಮಾಡಿದ್ದಾರೆ ಎಂದು ಟೀಕಿಸಿದ ಭರತ್ ರೆಡ್ಡಿ, ರಕ್ಷಾ ಬಂಧನ ಹಬ್ಬಕ್ಕೆ ಸಿಎಂ ಸಿದ್ದರಾಮಯ್ಯ ರಾಜ್ಯದ ಮಹಿಳೆಯರಿಗೆ ಉಡುಗೊರೆ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆ ಮೂಲಕ ಹಣ ನೀಡಿದ್ದಾರೆ. ನೀವು ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ಮೇಲೆ ಮತ್ತು ನಮ್ಮ ನಾಯಕರುಗಳ ಮೇಲೆ ಪ್ರೀತಿ ವಿಶ್ವಾಸ ಇಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಪ್ರಶಾಂತ್ ಮಿಶ್ರ, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಮೇಯರ್ ಕುಮಾರಿ ತ್ರಿವೇಣಿ, ಉಪಮೇಯರ್ ಜಾನಕಿ, ಪಾಲಿಕೆ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಸಾವಿರಾರು ಮಹಿಳೆಯರು ಭಾಗಿಯಾಗಿದ್ದರು.