ಹೊಸೂರು : ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಹೊರ ಬರುವಂತೆ ಮಾಡಿ ತಾಲೂಕು ಮತ್ತು ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಹರದನಹಳ್ಳಿ ಗ್ರಾಮದ ಸಿವಿಲ್ ಇಂಜಿನಿಯರ್ ಹೆಚ್.ಎನ್ ರಮೇಶ್ ತಿಳಿಸಿದರು.
ಹರದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ತರಬೇತಿಯನ್ನು ನೀಡಿದರೆ ಕ್ರೀಡೆ ಮತ್ತು ಪ್ರತಿಭಾಕಾರಂಜಿ ಕಾರ್ಯಕ್ರಮದಂತಹ ವೇದಿಕೆಯಲ್ಲಿ ಅತ್ಯುತ್ತಮ ಪ್ರದರ್ಶನ ಮಾಡುವ ಮೂಲಕ ಉತ್ತಮ ಸಾಧನೆ ಮಾಡುತ್ತಾರೆ. ತರಬೇತಿ ಇಲ್ಲದ ಕಾಟಾಚಾರದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆದರೆ ನಿಜವಾದ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗುತ್ತದೆ ಹಾಗಾಗಿ ಎಲ್ಲ ಶಾಲೆಯ ಮಕ್ಕಳನ್ನು ನಮ್ಮ ಶಾಲೆಯ ಮಕ್ಕಳೆಂದು ತಿಳಿದು ತರಬೇತಿ ನೀಡಿ ಉತ್ತಮ ಪ್ರದರ್ಶನ ಪ್ರದರ್ಶಿಸಲು ಪ್ರೋತ್ಸಾಹಿಸಿ ಇಂತಹ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಭಾಗವಹಿಸುವಂತೆ ಅವಕಾಶ ಕಲ್ಪಿಸಿ ಕೊಡಿಬೇಕು ಎಂದರು.
ಹರದನಹಳ್ಳಿ ಶಾಲೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದಲ್ಲಿ ಹಳೆ ವಿದ್ಯಾರ್ಥಿಗಳು ಮತ್ತು ಪ್ರಸ್ತುತ ಸಾಲಿನ ವಿದ್ಯಾರ್ಥಿಗಳು ಕ್ರೀಡೆ ಮತ್ತು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ಈಗಾಗಲೇ ತಮ್ಮದೇ ಆದ ಸಾಧನೆಗಳನ್ನು ಮಾಡಿದ್ದಾರೆ. ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಅದೇ ರೀತಿ ಇತ್ತೀಚಿಗೆ ನಡೆದ ಶ್ರೀ ಭೈರವೇಶ್ವರ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಹರದನಹಳ್ಳಿ ಶಾಲೆಯ ಮಕ್ಕಳು ಚಾಂಪಿಯನ್ಶಿಪ್ ಪಡೆದಿರುವುದು ನಮ್ಮೆಲ್ಲರಿಗೆ ಹೆಮ್ಮೆ ವಿಚಾರ. ಅಂತಹ ವಿದ್ಯಾರ್ಥಿಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಿ ಬೆನ್ನು ತಟ್ಟೋಣ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಮಿಮಿಕ್ರಿ ಚದ್ಮವೇಷ ಚಿತ್ರಕಲೆ ಮಹಾನೀಯರ ಸಾಧಕರ ಹೋರಾಟಗಾರರ ಮತ್ತು ಋಷಿಗಳ ದೇವರ ವೇಷಭೂಷಣಗಳನ್ನು ಧರಿಸಿ ಪ್ರದರ್ಶಿಸಿದ್ದು ಎಲ್ಲರ ಗಮನ ಸೆಳೆದಂತಿತ್ತು. ಮಣ್ಣಿನಲ್ಲಿ ಗಣಪತಿ ಮತ್ತು ದೇವರ ಮೂರ್ತಿ. ಅಪ್ಪುವಿನ ಮೂರ್ತಿಗಳನ್ನು ಹಾಗೂ ಇನ್ನಿತರ ವಿವಿಧ ರೀತಿಯಲ್ಲಿ ಮಾಡಿದ ಪ್ರದರ್ಶನಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಲವು ರೀತಿಯ ಕಾರ್ಯಕ್ರಮವನ್ನು ಕೊಟ್ಟಿದ್ದು ಎಲ್ಲರ ಮುಖದಲ್ಲಿ ನಗು ಉಂಟು ಮಾಡಿತು. ಆದರೆ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸದ ಕಾರಣ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿಲ್ಲ.
ಯಶಸ್ವಿ ಆಗದ ಕಾರ್ಯಕ್ರಮ
ಪ್ರತಿಭಾ ಕಾರಂಜಿ ಕಾರ್ಯಕ್ರಮ ಎಂದರೆ ಅದು ಸರ್ಕಾರದಿಂದ ಶಿಕ್ಷಣ ಇಲಾಖೆಯಲ್ಲಿ ಮಾಡಬೇಕಾದ ಕಾರ್ಯಕ್ರಮ ಆಗಿದ್ದು ಕಾಟಾಚಾರದ ಕಾರ್ಯಕ್ರಮವಾಗಿತ್ತು. ಕ್ಲಸ್ಟರ್ ಮಟ್ಟದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಶಾಲೆಗಳು ಇದ್ದರೂ ಕಾರ್ಯಕ್ರಮದಲ್ಲಿ ಸಮಯಕ್ಕೆ ತಕ್ಕಂತೆ ಭಾಗವಹಿಸದಿರುವುದು ಅಡಚಣೆಗೆ ಕಾರಣವಾಗಿದ್ದು, ಕಾರ್ಯಕ್ರಮದ ರೂಪ ರೇಖೆಗಳನ್ನು ಮೊದಲೇ ಸರಿಯಾಗಿ ಮಾಡಿಕೊಳ್ಳದ ಕಾರಣ ನಡೆದ ಕಾರ್ಯಕ್ರಮದಲ್ಲಿ ಗಸಿಬಿಸಿಯಾಗಿದ್ದು, ಶಿಕ್ಷಕರು ಮತ್ತು ಸಿ ಆರ್ ಪಿ ಗಳು ಪೂರ್ವ ಸಿದ್ಧತೆಯಲ್ಲಿ ಇರಲಿಲ್ಲ ಎಂದು ಗ್ರಾಮಸ್ಥರು ದೂರಿದರು. ಕಾರ್ಯಕ್ರಮ ಯಶಸ್ವಿ ಆಗಬೇಕಾದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಎಸ್ ಡಿ ಎಂ ಸಿ ಅಧ್ಯಕ್ಷರು ಮುಖ್ಯ ಶಿಕ್ಷಕರು ಕ್ಲಸ್ಟರ್ ಮಟ್ಟದ ಅಧಿಕಾರಿಗಳು ಹಾಗೂ ಪೋಷಕರು ಪೂರ್ವಭಾವಿ ಸಭೆ ಕಾರ್ಯಕ್ರಮ ಮಾಡಬೇಕಿತ್ತು, ಅದರಲ್ಲಿ ಎಡವಿದ ಶಿಕ್ಷಕರು ಕಾರ್ಯಕ್ರಮ ವಿಫಲವಾಗಲು ಕಾರಣವಾಗಿತ್ತು ಕ್ಲಸ್ಟರ್ ಮಟ್ಟದಲ್ಲಿ ಕೆಲವು ಶಾಲೆಗಳು ಭಾಗವಹಿಸಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಮುಂದಾಗುವ ಪ್ರತಿಭಾಕಾರಂಜಿ ಕಾರ್ಯಕ್ರಮಕ್ಕೆ ಶಿಕ್ಷಣ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರದ ಮಾರ್ಗಸೂಚಿ ತಿಳಿಸುತ್ತಾರ ಎಂದು ಕಾದು ನೋಡಬೇಕಿದೆ.
ಕಾರ್ಯಕ್ರಮದಲ್ಲಿ ಹರದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ್, ಶೀಗವಾಳ ಗ್ರಾಪಂ ಅಧ್ಯಕ್ಷೆ ಪವಿತ್ರ. ಉಪಾಧ್ಯಕ್ಷ ಕೃಷ್ಣೇಗೌಡ, ಸದಸ್ಯರಾದ ಮಂಜುಳಾರಮೇಶ್, ಮಂಜುಳಾ ಚಂದ್ರು, ನವೀನ್, ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ್, ಸಿ ಆರ್ ಪಿ ಧರಣಿ, ಪ್ರೌಢಶಾಲೆ ದೈಹಿಕ ಶಿಕ್ಷಕ ಹುಸೇನ್ ಪಾಷಾ, ಹೆಬ್ಸೂರು ಶಾಲಾ ಶಿಕ್ಷಕ ಕುಮಾರ್, ಹರದನಹಳ್ಳಿ ರಮೇಶ್, ರೇಣುಕಾ, ಬೆಟ್ಟಳ್ಳಿ ಗುರು ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.