Saturday, April 19, 2025
Google search engine

Homeಸ್ಥಳೀಯಭಾರತೀಯ ಸಂಸ್ಕೃತಿ ಜಗತ್ತಿನಲ್ಲೇ ಶ್ರೇಷ್ಠವಾದದ್ದು

ಭಾರತೀಯ ಸಂಸ್ಕೃತಿ ಜಗತ್ತಿನಲ್ಲೇ ಶ್ರೇಷ್ಠವಾದದ್ದು


ಮೈಸೂರು: ಮಾತೃದೇವೋ ಭವ ಪಿತೃದೇವೋಭವ ಎನ್ನುತ್ತಾ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂದು ಜೀವನ ಪರ್ಯಂತ ನಮಿಸುತ್ತಲೇ ಬದುಕುವ ನಮ್ಮ ಭಾರತೀಯ ಸಂಸ್ಕೃತಿ ಅದರಲ್ಲೂ ವಿಶೇಷವಾಗಿ ನಮ್ಮ ಕನ್ನಡ ಸಂಸ್ಕೃತಿ ಜಗತ್ತಿನಲ್ಲಿ ಶ್ರೇಷ್ಠತಮವಾದದ್ದೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.

ಹೆಗ್ಗಡದೇವನ ಕೋಟೆ ತಾಲೂಕಿನ ಕ್ಯಾತನಹಳ್ಳಿಯ ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆ ಮತ್ತು ಮೈಸೂರಿನ ಹಿರಣ್ಮಯಿ ಪ್ರತಿಷ್ಠಾನ ಹಾಗು ಕಾವೇರಿ ಬಳಗ ಸಂಯುಕ್ತವಾಗಿ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಸ್ಕೃತಿ ಸಂಭ್ರಮ ಮತ್ತು ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಂದೆ-ತಾಯಿಯರಲ್ಲಿ, ಗುರು-ಹಿರಿಯರಲ್ಲಿ, ಪ್ರಕೃತಿಯಲ್ಲಿ, ಅಷ್ಟೇ ಏಕೆ ಗೋಮಾತೆಯೆಂದು ಪ್ರಾಣಿಗಳಲ್ಲೂ ಪೂಜನೀಯ ದೇವರನ್ನು ಕಾಣುವ ಸಂಸ್ಕಾರ, ಸಂಸ್ಕೃತಿ ನಮ್ಮದಾಗಿದ್ದು ಹಾಗೆಯೇ ಇದೆಲ್ಲಕ್ಕೂ, ಇದೆಲ್ಲರಿಗೂ ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಬಹು ಮಹತ್ತ್ವದ ಸ್ಥಾನ ನೀಡಲಾಗಿದೆಯೆಂದರು.

ಮೈಸೂರು ಜಿಲ್ಲಾ ಡಯಟ್ ಉಪನ್ಯಾಸಕ ಅರ್.ತಮ್ಮಯ್ಯ ಪ್ರಧಾನ ಭಾಷಣ ಮಾಡಿ, ವಿದ್ಯೆಯಿಂದ ಸಾಧಕರೂ ಆಗಿ ಸಂಪಾದಕರೂ ಆಗಿ ಉತ್ತಮ ಬದುಕನ್ನು, ಶ್ರೇಷ್ಠ ಭವಿಷ್ಯ ಕಟ್ಟಿಕೊಳ್ಳಬಹುದು. ನಾನು ಈ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದ ಕಾಲದಲ್ಲಿ ಐವತ್ತು ಪೈಸೆಗೂ ಕಷ್ಟವಿತ್ತು. ಆದರೆ, ಈಗ ನಾನು ಒಂದು ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುವ ವ್ಯಕ್ತಿಯಾಗಿದ್ದೇನೆಂದರೆ ಇದಕ್ಕೆ ನಾನು ಕಲಿತ ವಿದ್ಯೆಯೇ ಕಾರಣ. ವಿದ್ಯೆ ಅಥವಾ ಶಿಕ್ಷಣ ನನಗೆ ಎಲ್ಲವನ್ನೂ ಕೊಟ್ಟಿದೆ. ಸರಿಯಾದ ವಿದ್ಯಾವಂತರಾದಲ್ಲಿ ನಿಮಗೂ ಕೊಡುತ್ತದೆ. ಒಂದು ಕಾಲದಲ್ಲಿ ನಿಮ್ಮ ಹಾಗೆಯೇ ನಾನೂ ಸಹ ನೀವು ಕುಳಿತಿರುವಲ್ಲೇ ಕುಳಿತುಕೊಂಡು ಪಾಠ ಕಲಿತವನು. ಗಾಂಧಿವಾದಿ ಟಿ.ಎಸ್.ಸುಬ್ಬಣ್ಣ ಹೆಸರಿನ ಈ ಶಾಲೆಗೆ ಬಹು ದೊಡ್ಡ ಇತಹಾಸವೇ ಇದೆ. ಗ್ರಾಮೀಣ ಭಾಗದ ಮಕ್ಕಳೆಲ್ಲರೂ ವಿದ್ಯಾವಂತರಾಗಬೇಕೆಂಬ ಮಹದಾಶಯದಿಂದ ಗಾಂಧಿವಾದಿ ಟಿ.ಎಸ್.ಸುಬ್ಬಣ್ಣ ಬಹಳ ಶ್ರಮಪಟ್ಟು ಸ್ಥಾಪಿಸಿದ ಶಾಲೆಯಿದು.

ಸ್ಮರಣೀಯ ಸುಬ್ಬಣ್ಣ: ಅಚ್ಚರಿ ಎಂದರೆ ಇಲ್ಲಿ ಕಲಿತವರಾರೂ ಖಾಲಿ ಕುಳಿತಿಲ್ಲ. ಎಲ್ಲರೂ ಒಳ್ಳೊಳ್ಳೆಯ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿ, ಖಾಸಗೀ ಸಂಸ್ಥೆಗಳಲ್ಲೂ ಉತ್ತಮ ಉದ್ಯೋಗ ಪಡೆದು ಜೀವನದಲ್ಲಿ ಯಶಸ್ಸು ಕಂಡು ಸಾಧಕರಾಗಿದ್ದಾರೆ. ಇವರೆಲ್ಲರೂ ಸುಬ್ಬಣ್ಣನವರನ್ನು ನಿತ್ಯ ನೆನೆಯಬೇಕು. ಬದುಕು ಕೊಟ್ಟವರನ್ನು ಹೀಗೆ ಸ್ಮರಿಸಿಕೊಂಡು ಸಂಭ್ರಮಿಸುವುದೇ ನಮ್ಮ ಸಂಸ್ಕೃತಿ ಎಂದ ಅವರು, ಸಮಯ ಪ್ರಜ್ಞೆ, ಆತ್ಮಸ್ಥೈರ್ಯ, ಆತ್ಮ ವಿಶ್ವಾಸ, ಆಲೋಚನಾ ಶಕ್ತಿ, ಅಧ್ಯಯನ ಶೀಲತೆ, ಏಕಾಗ್ರತೆ, ಜ್ಞಾನದಾಹ, ಕನಸುಗಾರಿಕೆ, ಉತ್ಸಾಹ, ಸೃಜನಶೀಲತೆ, ಕ್ರಿಯಾತ್ಮಕತೆ, ಅವಿರತ ಪರಿಶ್ರಮ ಇವುಗಳೆಲ್ಲವೂ ವಿದ್ಯಾರ್ಥಿಗಳಲ್ಲಿರಬೇಕಾದ ಬಹು ಮುಖ್ಯಗುಣಾಂಶಗಳು. ಇವುಗಳೆಲ್ಲವನ್ನೂ ಕಲಿಕೆಯ ಮಾರ್ಗದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಯಶಸ್ಸು ಸಾಧಿಸಬಹುದೆಂದು ಕಿವಿಮಾತು ಹೇಳಿದರು.

ವಿಶ್ರಾಂತ ಶಿಕ್ಷಕಿಯೂ ಆದ ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಅವರು ಶಾಲೆಯ ಉನ್ನತ ಶ್ರೇಣಿತ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಕು.ಚೈತನ್ಯ ಮತ್ತು ಕು.ವರ್ಷಿತಾ ಹಾಗೂ ಕು.ಸಹನಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.ಹಾಗೆಯೇ ಗುರು-ಹಿರಿಯರನ್ನು ಗೌರವಿಸುವ ಕೈಂಕರ್ಯವೇ ನಮ್ಮ ಸಂಸ್ಕೃತಿ ಎಂಬ ಮಾತಿಗೆ ಅನ್ವರ್ಥವಾಗಿ ಶಾಲೆ ಮತ್ತು ಶಾಲೆಯ ವಿದ್ಯಾರ್ಥಿಗಳ ಹಿತೈಷಿಗಳಾದ ಊರಿನ ಹಿರಿಯರಾದ ಚಿಕ್ಕನಾಯಕ, ಜಗನ್ನಾಥ್, ಕುಮಾರ್ ಹಾಗೂ ನಾಗರತ್ನ ಅವರುಗಳನ್ನು ಕಾವೇರಿ ಮತ್ತು ಹಿರಣ್ಮಯಿ ಎರಡೂ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ವಿಶ್ರಾಂತ ಶಿಕ್ಷಕ ಎ.ಸಂಗಪ್ಪ, ಮುಖ್ಯ ಶಿಕ್ಷಕ ಬಿಳಿಕೆರೆ ಬಿ.ರಮೇಶ್, ಶಿಕ್ಷಕರಾದ ಬಿ.ಎಸ್.ತಿರುಮಲ್ಲೇಶ್, ಎಂ.ರಾಘವೇಂದ್ರ, ಪ್ರಕಾಶ್ ಚಾಮಲಾಪುರ, ಹೆಚ್.ಎಂ.ಶೋಭಾ, ಸುಧಾ ಪೂಜಾರ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular