ಮೈಸೂರು: ದೇಶ ಹೊಡೆಯುವ ಕೆಲಸ ನಡೆಯುತ್ತಿದ್ದು, ಅದನ್ನು ತಪ್ಪಿಸಲು ಎಲ್ಲರೂ ಒಂದಾಗಿ ವಿರೋಧಿಸಬೇಕು ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಹೇಳಿದರು.
ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ ಪ್ರೊ.ಮುಜಾಫರ್ ಅಸ್ಸಾದಿ ಮತ್ತು ಪ್ರೊ.ಜಿ.ಟಿ.ರಾಮಚಂದ್ರಪ್ಪ ಅವರ ನಿವೃತ್ತಿಯ ಸಂದರ್ಭದಲ್ಲಿ ಗೌರವಾರ್ಥ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಅಭಿನಂದನಾ ಗ್ರಂಥಗಳ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಯಾವುದೇ ಸಿದ್ದಾಂತ ಪ್ರತಿಪಾದನೆ ಮಾಡದೆ ಕೇವಲ ಹಿಂದುತ್ವ ಪ್ರತಿಪಾದನೆ ನಡೆಯುತ್ತಿದೆ. ಧಾರ್ಮಿಕ ಮೂಲಭೂತವಾದಕ್ಕೆ ಅನುಕೂಲವಾಗುವ ವಿಚಾರ ಬಚ್ಚಿಡಲಾಗುತ್ತಿದೆ. ಆದ್ದರಿಂದ ದಲಿತ, ಕ್ರಿಶ್ಚಿಯನ್, ಮುಸ್ಲಿಂ ಐಡೆಂಟಿಟಿಯ ಜತೆಗೆ ಅಂತರ ಸಮುದಾಯ ಸಾಮೂಹಿಕ ಐಡೆಂಟಿಟಿ ಮೂಲಕ ದೇಶ ಹೊಡೆಯುವುದನ್ನು ತಪ್ಪಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಪ್ರಶ್ನೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅಭಿವ್ಯಕ್ತ ಸ್ವಾತಂತ್ರ್ಯ ಉಪಯೋಗಿಸಿಕೊಂಡು ದಬ್ಬಾಳಿಕೆ ವಿರೋಧಿಸಬೇಕು ಎಂದರು.
ಸಮಾಜದ ಆಗು-ಹೋಗು, ಬಿರುಕು, ಕಷ್ಟ ಕಾರ್ಪಣ್ಯಗಳನ್ನು ಪ್ರಶ್ನೆ ಮಾಡುವ ಒಂದು ಪ್ರವೃತ್ತಿ ಜಾಗತೀಕರಣದಿಂದ ಬರುತ್ತದೆ ಎನ್ನುತ್ತಾರೆ. ಆದರೆ, ಪ್ರಶ್ನೆ ಮಾಡುವುದು, ವಾದ ಮಾಡುವುದು, ಸಂವಾದ ನಡೆಸುವುದು ಪ್ರಜಾಪ್ರಭುತ್ವದಲ್ಲಿ ಮುಖ್ಯ ವಿಚಾರವಾಗಿದೆ. ಅದು ಹಿಂದಿನಿದ ನಮ್ಮಲ್ಲೂ ಇತ್ತು. ಆದರೆ, ಅದನ್ನು ಏಕೆ ಮರೆಮಾಚಿದರು ಎಂದು ಪ್ರಶ್ನಿಸಿದರು.
ಧಾರ್ಮಿಕ ಮೂಲಭೂತವಾದಕ್ಕೆ ಪೋಷಣೆಗಾಗಿ ಸತ್ಯಗಳನ್ನು ಬಚ್ಚಿಡುವ ಕೆಲಸವಾಗಿದೆ. ಸ್ವಾಮಿ ವಿವೇಕಾನಂದ ಅವರ ವಿಶ್ವಮಾನವ ಸಂದೇಶಗಳನ್ನು ಬಚ್ಚಿಟ್ಟು, ಅವರನ್ನು ಹಿಂದು ಧರ್ಮಕ್ಕೆ ಸೀಮಿತಗೊಳಿಸುವ ಕೆಲಸವೂ ನಡೆದಿದೆ. ಸ್ವಾಮಿ ವಿವೇಕಾನಂದದರ ಬಗ್ಗೆ ಮಾತನಾಡಿದ್ದಾಗ ನಮ್ಮ ಪಕ್ಷದವರೇ ಹುಬ್ಬೇರಿಸಿದರು. ಬಹುತೇಕರು ವಿವೇಕಾನಂದರ ಬಗ್ಗೆ ಓದದೆ ತಪ್ಪು ಕಲ್ಪನೆಯಲ್ಲಿದ್ದಾರೆ. ನಾನು ಓದುವ ಪ್ರಯತ್ನ ಮಾಡಿದ್ದೇನೆ ಎಂದರು. ಪ್ರತಿಯೊಬ್ಬರು ಒಂದೇ ಧರ್ಮಕ್ಕೆ ಸೇರಿ, ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬಾರದಿರಲಿ, ಆಗ ಧರ್ಮ ಮತ್ತು ಆಧ್ಯಾತ್ಮೀಕ ಭಾವನೆ ನಾಶವಾಗುವವು, ಮನಷ್ಯ ಮನುಷ್ಯರ ನಡುವೆ ಇರುವ ಸಹೋದರ ಭಾವನೆಗಳಿಗೆ, ಹಿಂದು, ಕಿಶ್ಚಿಯನ್, ಮುಸ್ಲಿಂ ಮುಂತಾದ ಹೆಸರುಗಳು ದೊಡ್ಡ ಆತಂಕವಾಗಿವೆ. ಮೊದಲು ಅವುಗಳನ್ನು ಮುರಿಯಲು ಪ್ರಯತ್ನಿಸಬೇಕು. ಅವು ತಮ್ಮಲ್ಲಿದ್ದ ಒಳ್ಳೆಯ ಶಕ್ತಿಗಳನ್ನು ಕಳೆದುಕೊಂಡು ಈಗ ಕೇವಲ ನಾಶಕಾರಿ ಶಕ್ತಿಯನ್ನು ಮಾತ್ರ ಹೊಂದಿವೆ. ನಮ್ಮಲ್ಲಿ ಉತ್ತಮರಾದವರೂ ಅದರ ಭಯಾನಕ ಪ್ರಭಾವಕ್ಕೆ ಒಳಗಾಗಿ ಪಿಶಾಚಿಯಂತಾಗಿದ್ದಾರೆ ಎಂಬ ಸಂದೇಶ ನೀಡಿದ್ದಾರೆ. ಇದಕ್ಕಿಂತ ವಿಶ್ವಮಾನವ ಸಂದೇಶ ಏನು ಬೇಕು. ಆದರೆ, ಅದನ್ನು ಮರೆ ಮಾಚಲಾಗಿದೆ ಎಂದರು.
ಔರಂಗಜೇಬ್‌ನ ಪುತ್ರನೊಬ್ಬ ನಮ್ಮ ರಾಮಾಯಣ ಮತ್ತು ಮಹಾಭಾರತವನ್ನು ಪರ್ಶಿಯನ್ ಭಾಷೆಗೆ ಅನುವಾದಿ ಅದನ್ನು ಇಡೀ ಪ್ರಪಂಚಕ್ಕೆ ತಲುಪಿಸಲು ಪ್ರಯತಿಸಿದ್ದಾನೆ. ಇದು ಎಷ್ಟು ಜನರಿಗೆ ಗೊತ್ತು? ಈ ವಿಚಾರವನ್ನು ಏಕೆ ಹೇಳುವುದಿಲ್ಲ? ಎಂದು ಪ್ರಶ್ನಿಸಿದ ಅವರು, ಎಲ್ಲರೂ ದ್ವೇಷಿಗಳಾಗಬೇಕಾ ಎಂದು ಪ್ರಶ್ನಿಸಿದರು. ಈದ್ ದಿನ ಮುಸ್ಮಿಂ ಸಮುದಾಯದ ಅನೇಕರು ಮಂತ್ರಾಲಯಕ್ಕೆ ಹೋಗಿ ಪೂಜೆ ಸಲ್ಲುತ್ತಿದ್ದಾರೆ ಇಂತಹ ಭಾವೈಕ್ಯತೆಯ ಸಂಪ್ರದಾಯಗಳನ್ನು ಹೊರ ಜಗತ್ತಿಗೆ ತಿಳಿಸಬೇಕು ಎಂದರು.
ವಿಧಾನಪರಿಷತ್ ಸಭಾಪತಿಯಾಗಿದ್ದಾಗ ಬೆಂಗಳೂರಿನಲ್ಲಿ ಐದು ಮದರಸಗಳಿಗೆ ಭೇಟಿ ನೀಡಿದ್ದೆ. ಅಲ್ಲಿ ೧೦ ವರ್ಷದ ಹೆಣ್ಣು ಮಕ್ಕಳು, ೧೪ ವರ್ಷದ ಗಂಡು ಮಕ್ಕಳು ಕುರಾನ್ ಓದುತ್ತಿದ್ದರು. ಆಗ ಅಲ್ಲಿಗೆ ಐದು ಕಂಪ್ಯೂಟರ್‌ಗಳನ್ನು ನೀಡಲಾಯಿತು. ಮೂರು ತಿಂಗಳು ಬಿಟ್ಟು ಅದೇ ಮದರಸಗಳಿಗೆ ಹೋಗಿ ನೋಡಿದರೆ ಆಶ್ಚರ್ಯವಾಯಿತು. ಎಲ್ಲ ಮಕ್ಕಳು ಅಮೆರಿಕಾ, ಯುಕೆ ಮಕ್ಕಳಂತೆ ಕಂಪ್ಯೂಟರ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಈಗ ನಮ್ಮ ಸರ್ಕಾರದಲ್ಲಿ ಇಂತಹ ಯೋಜನೆಯನ್ನು ಮುಂದುವರೆಸಲು ಆಸಕ್ತರಾಗಿದ್ದಾರೆ ಎಂದರು.
ಇದೇ ವೇಳೆ ಸ್ಮತಿ ಹಾಗೂ ಸ್ನೇಹಾದ್ರಿ ಅಭಿನಂದನಾ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ಪ್ರೊ.ಮುಜಾಫರ್ ಅಸ್ಸಾದಿ ಮತ್ತು ಪ್ರೊ.ಜಿ.ಟಿ.ರಾಮಚಂದ್ರಪ್ಪ ಅವರನ್ನು ಅಭಿನಂದಿಸಲಾಯಿತು. ಹಿರಿಯ ವಕೀಲ ಡಾ.ಅದಿತ್ಯ ಸೊಂಧಿ, ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎಂ.ರಾಜಶೇಖರ್, ಪ್ರೊ.ಕೃಷ್ಣ ಹೊಂಬಾಳೆ ಇತರರಿದ್ದರು.