ಮೈಸೂರು: ಭಾರತ ದೇಶವನ್ನು ಅರ್ಥಮಾಡಿಕೊಳ್ಳದೆ ಸಂವಿಧಾನವನ್ನು ನೀವು ಯಾವ ಭಾಷೆಯಲ್ಲಿ ಓದಿದರೂ ಅರ್ಥವಾಗುವುದಿಲ್ಲ ಎಂದು ಹೈಕೋಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅಭಿಪ್ರಾಯಪಟ್ಟರು.
ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ಎಸ್‌ಸಿ, ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಐಎಫ್‌ಟಿಟಿಸಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೨ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಧರ್ಮಕ್ಕೂ ಒಂದು ಗ್ರಂಥವಿರುತ್ತದೆ. ಆದರೆ, ಎಲ್ಲ ಭಾರತೀಯರಿಗೂ ಇರುವುದು ಸಂವಿಧಾನ ಗ್ರಂಥ ಮಾತ್ರ. ಅದನ್ನು ಓದಿ, ಅರ್ಥಮಾಡಿಕೊಂಡು ಅದರಂತೆಯೇ ನಡೆದರೆ ಮಾತ್ರವೇ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸಂವಿಧಾನದ ಮಾರ್ಗದಲ್ಲಿ ಬದುಕಿದರೆ ನಾವು ಬೆಳೆಯುತ್ತೇವೆ. ದೇಶವೂ ಬೆಳೆಯುತ್ತದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಹರಿದು ಹಂಚಿಹೋಗಿತ್ತು. ಶಿಕ್ಷಣ, ಕೃಷಿ ಸೇರಿದಂತೆ ಎಲ್ಲ ವರ್ಗಗಳಲ್ಲಿಯೂ ಅಭಿವೃದ್ಧಿ ಕಾಣದ ಪರಿಸ್ಥಿತಿಗಳಿದ್ದವು. ಸಂವಿಧಾನ ರಚನೆಯಾದ ಬಳಿಕ ಕೃಷಿ ಕ್ಷೇತ್ರದ ಜತೆಗೆ ಕೈಗಾರಿಕೆ, ಅನಕ್ಷರತೆಯ ಬದಲಿಗೆ ಅಕ್ಷರತೆ, ಮೂಡನಂಬಿಕೆ ಬದಲಿಗೆ ವೆಜ್ಞಾನಿಕತೆ ಸೇರಿದಂತೆ ಸಾಕಷ್ಟು ಬದಲಾವಣೆಗಳನ್ನು ಕಾಣುವಂತಾಯಿತು. ಸಂವಿಧಾನದಲ್ಲಿ ಸಮಾನತೆ ನೀಡಿರುವುದರಿಂದಲೇ ದಲಿತ ಸಮುದಾಯವಿದ್ದು ಉಪ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರ್ರಿ, ಮಂತ್ರಿ, ಎಂಎಲ್‌ಎ, ಎಂಪಿ, ಐಎಎಸ್, ಐಪಿಎಸ್ ಸೇರಿದಂತೆ ಎಲ್ಲ ಪದವಿ ಪಡೆಯಲು ಸಾಧ್ಯವಾಗಿದೆ ಎಂದರು.
ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಗಳ ರೀತಿ ನಡೆಸಿಕೊಳ್ಳಲಾಗುತ್ತಿತ್ತು. ಮಹಿಳೆಯರ ಅನ್ಯಾಯಗಳನ್ನು ಸರಿ ಪಡಿಸಲು ಹಿಂದು ಕೋಡ್ ಬಿಲ್ ಮಂಡಿಸಿದ್ದ ಅಂಬೇಡ್ಕರ್. ಆದರೆ, ಅಂದು ಅವರ ಪಕ್ಷ ಅಧಿಕಾರದಲ್ಲಿ ಇದ್ದರೂ ಬಿಲ್ ಪಾಸಾಗಲಿಲ್ಲ. ಹಾಗಾಗಿ, ನೊಂದು ಅವರು ರಾಜೀನಾಮೆ ನೀಡಿ ಹೊರ ಬಂದರು. ಮದುವೆ, ಆಸ್ತಿ ಹಕ್ಕು, ಸಾಮಾಜಿಕ ಭದ್ರತೆ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಅನೇಕ ಅಂಶಗಳು ಬಿಲ್‌ನಲ್ಲಿ ಇತ್ತು. ಈಗ ಬಿಲ್‌ನಲ್ಲಿದ್ದ ಎಲ್ಲ ಅಂಶಗಳು ಜಾರಿಯಾಗಿವೆ. ಇದರ ಫಲವಾಗಿ ಮಹಿಳೆಯರೂ ಕೂಡ ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟಿದ್ದು, ಜೀವನದಲ್ಲಿಯೂ ಬದಲಾವಣೆಯನ್ನು ಕಂಡಿದ್ದಾರೆ ಎಂದರು.
ವೃತ್ತ, ಬಡಾವಣೆ, ರಸ್ತೆಗಳಿಗೆ ಅಂಬೇಡ್ಕರ್ ಹೆಸರನ್ನು ನಾಮಕರಣ ಮಾಡಿದರೆ ಸಾಲದು. ಅಂಬೇಡ್ಕರ್ ಅಮಲು ಬೆಳೆಸಿಕೊಳ್ಳುವ ಬದಲು ಅಂಬೇಡ್ಕರ್ ಅರಿವು ಮೂಡಿಸಿಕೊಳ್ಳಬೇಕು ಎಂದರು.
ಔಷಧ ಕಂಡು ಹಿಡಿಯಿರಿ: ರಂಗಕರ್ಮಿ ಸಿ.ಬಸವಲಿಂಗಯ್ಯ ಮಾತನಾಡಿ, ಸಮಾಜದಲ್ಲಿನ ತಾರತಮ್ಯ ಮತ್ತು ಜಾತಿ ವ್ಯವಸ್ಥೆಗೆ ವಿಜ್ಞಾನಿಗಳು ಔಷಧ ಕಂಡು ಹಿಡಿಯಬೇಕಾಗಿದೆ. ಆ ಔಷಧ ಸೇವಿಸಿದ ಕೂಡಲೇ ಸಮಾಜದಿಂದ ಜಾತಿ ವ್ಯವಸ್ಥೆ ಓಡಿ ಹೋಗುವಂತೆ ಔಷಧ ಸಂಶೋಧಿಸಬೇಕಾಗಿದೆ. ನಾವು ಚಂದ್ರಯಾನಕ್ಕೆ ಹೋದರೂ ಮ್ಯಾನ್‌ಹೋಲ್‌ಗೆ ಇಳಿಯುತ್ತಿದ್ದೇವೆ. ಈಗ ಯಾರು ಮನುಷ್ಯರಾಗದೆ ಕೇವಲ ಜಾತಿಯಾಗಿದ್ದೇವೆ. ವಿದೇಶಕ್ಕೆ ಹೋದರೂ ಜಾತಿ ಕೊಂಡೊಯ್ಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನದಲ್ಲಿ ಮತಾಂತರ ಮೂಲಭೂತ ಹಕ್ಕು ಇದೆ. ಯಾರು ಬೇಕಾದರೂ ತಮಗೆ ಇಷ್ಟ ಇಲ್ಲದ ಧರ್ಮದಿಂದ ಅನ್ಯ ಧರ್ಮಕ್ಕೆ ಹೋಗಬಹುದಾಗಿದೆ ಎಂದರು. ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಸ್ವಾಮಿ ಇದ್ದರು.