ಮುಂಬೈ: ಇನ್ನು ಕೆಲ ದಿನಗಳಲ್ಲಿ ಭಾರತದಲ್ಲಿ ವಿಶ್ವ ಕ್ರಿಕೆಟ್ ಜಾತ್ರೆ ಶುರುವಾಗಲಿದೆ ಇದಕ್ಕಾಗಿ ಐಸಿಸಿ ಜೋರಾಗಿಯೇ ಪ್ರಚಾರ ಮಾಡುತ್ತಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯದ ಮುಖಾಂತರ ಅಧಿಕೃತ ಚಾಲನೆ ಸಿಗಲಿದೆ. ಈಗಾಗಲೇ ವಿಶ್ವಕಪ್‌ನ ವೇಳಾ ಪಟ್ಟಿ ಬಿಡುಗಡೆಯಾಗಿದ್ದು, ಟಿಕೆಟ್ ಬುಕ್ಕಿಂಗ್ ಸಹ ಆರಂಭವಾಗಿದೆ. ಇಂದಿನಿಂದ ಚೆನ್ನೈ, ದೆಹಲಿ ಮತ್ತು ಪುಣೆಯಲ್ಲಿ ನಡೆಯಲಿರುವ ಭಾರತದ ಪಂದ್ಯಗಳಿಗೆ ಟಿಕೆಟ್ ಮಾರಾಟವಾಗಲಿದೆ.
ಚೆನ್ನೈ, ದೆಹಲಿ ಮತ್ತು ಪುಣೆಯಲ್ಲಿ ಭಾರತದ ವಿಶ್ವಕಪ್ ಪಂದ್ಯಗಳ ಟಿಕೆಟ್‌ಗಳು ಗುರುವಾರ ರಾತ್ರಿ ೮ ರಿಂದ ಪ್ರಾರಂಭವಾಗಲಿದೆ. ಟಿಕೆಟ್ ಪಡೆಯಲು ಇಚ್ಛಿಸುವ ಇಂದು ರಾತ್ರಿ ೮ ಗಂಟೆಗೆ ಅಧಿಕೃತ ಟಿಕೆಟಿಂಗ್ ವೆಬ್‌ಸೈಟ್ https:// tickets. cricketworldcup. com ಭೇಟಿ ನೀಡಿ ಖರೀದಿಸಬಹುದಾಗಿದೆ. ನವೆಂಬರ್ ೧೯ ರಂದು ಫೈನಲ್‌ನೊಂದಿಗೆ ಮುಕ್ತಾಯಗೊಳ್ಳಲಿದೆ.
ಐಸಿಸಿ ಪತ್ರಿಕಾ ಪ್ರಕಟಣೆಯ ಪ್ರಕಾರ, ಧರ್ಮಶಾಲಾ, ಲಖನೌ ಮತ್ತು ಮುಂಬೈನಲ್ಲಿ ಭಾರತದ ಪಂದ್ಯಗಳ ಟಿಕೆಟ್‌ಗಳು ಸೆಪ್ಟೆಂಬರ್ ೧ ರಂದು ಮಾರಾಟಕ್ಕೆ ಲಭ್ಯವಿರುತ್ತವಂತೆ. ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಭಾರತದ ಪಂದ್ಯಗಳ ಟಿಕೆಟ್‌ಗಳು ಸೆಪ್ಟೆಂಬರ್ ೨ ರಂದು ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ. ಅಹಮದಾಬಾದ್‌ನಲ್ಲಿ ಭಾರತದ ಪಂದ್ಯಗಳ ಟಿಕೆಟ್‌ಗಳು ಸೆಪ್ಟೆಂಬರ್ ೩ರಿಂದ ಲಭ್ಯವಿರುತ್ತವೆ. ಮತ್ತು ಸೆಮಿಫೈನಲ್ ಮತ್ತು ಫೈನಲ್‌ನಂತಹ ಪ್ರಮುಖ ಪಂದ್ಯಗಳ ಟಿಕೆಟ್‌ಗಳು ಸೆಪ್ಟೆಂಬರ್ ೧೫ ರಂದು ಲಭ್ಯವಿರುತ್ತವೆ ಎಂದು ಹೇಳಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಮಾತನಾಡಿ, ನಾವು ಐಸಿಸಿ ವಿಶ್ವಕಪ್ ಕ್ರಿಕೆಟ್‌ನ ಟಿಕೆಟ್ ಮಾರಾಟಕ್ಕೆ ಚಾಲನೆ ನೀಡುವ ಮೂಲಕ ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ. ನಮ್ಮ ದೇಶದ ಮೂಲೆ ಮೂಲೆ ಮತ್ತು ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗನ್ನು ಸ್ವಾಗತಿಸಲು ನಮ್ಮ ಸ್ಥಳಗಳು ಸಿದ್ಧವಾಗಿವೆ. ವಿಶ್ವ ದರ್ಜೆಯ ಮೂಲ ಸೌಕರ್ಯದೊಂದಿಗೆ ನಾವು ವಿಶ್ವಕಪ್ ಅನುಭವವನ್ನು ಇತರರಿಗಿಂತ ಭಿನ್ನವಾಗಿ ನೀಡಲು ಸಿದ್ಧರಾಗಿದ್ದೇವೆ ಎಂದು ಹೇಳಿದರು.