ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಮಂಡ್ಯದಲ್ಲಿ ದಿನೇ ದಿನೇ ಕಾವೇರಿ ಹೋರಾಟ ಹೆಚ್ಚಾಗುತ್ತಲೇ ಇದ್ದು, ಇಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನಾ ಧರಣಿ ನಡೆಸಲಾಗುತ್ತಿದೆ.
ಪ್ರತಿಭಟನೆಗೆ ರೈತ ಪರ, ಕನ್ನಡ ಪರ ಸೇರಿದಂತೆ ಹಲವು ಸಂಘಟನೆಗಳು ಸಾಥ್ ನೀಡಿವೆ. ಇದರೊಂದಿಗೆ ಕೆಲ ಕಾಂಗ್ರೆಸ್ , ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ರಕ್ತ ಕೊಟ್ಟಿವು ನೀರು ಕೊಡಲ್ಲ ಎಂದು ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ-ಡಿಸಿಎಂ ನಡುವೆ ಹೊಂದಾಣಿಕೆ ಇಲ್ಲ: ಕೆ.ಟಿ.ಶ್ರೀಕಂಠೇಗೌಡ
ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದ್ದು, ಸಿಎಂ-ಡಿಸಿಎಂ ನಡುವೆ ಹೊಂದಾಣಿಕೆ ಇಲ್ಲ. ಕಾವೇರಿ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಮಾಜಿ ಎಂಎಲ್ ಸಿ ಕೆ.ಟಿ.ಶ್ರೀಕಂಠೇಗೌಡ ಆರೋಪಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಕಷ್ಟದ ಪರಿಸ್ಥಿತಿಯಲ್ಲಿ ರೈತರ ಹಿತಕಾಯುವಲ್ಲಿ ಸರ್ಕಾರ ವಿಫಲವಾಗಿದೆ. ಕಳೆದ 15 ದಿನಗಳಿಂದ ತಮಿಳುನಾಡಿಗೆ ನೀರು ಬಿಡಲಾಗಿತ್ತು. ಮತ್ತೆ ಇದೀಗಾ ತಮಿಳುನಾಡಿಗೆ ನೀರು ಹೋಗ್ತಿದೆ. ಸರ್ಕಾರ ಕೇಂದ್ರದ ಬಳಿ ಮಾತನಾಡುವಲ್ಲಿ ವಿಫಲವಾಗಿದೆ ಎಂದು ಹರಿಹಾಯ್ದರು.
ಕರ್ನಾಟಕ ರಾಜ್ಯದ್ದು ಶೇ 52 ಭಾಗ, ತಮಿಳುನಾಡಿನದು 30 ಭಾಗ. ನಾವು ನಮ್ಮ ರೈತರಿಗೆ ನೀರು ಕೊರತೆ ಇದೆ. ತಮಿಳುನಾಡು ಮೂರನೇ ಬೆಳೆ ಬೆಳೆಯುತ್ತದೆ. ತಜ್ಞರ ಜೊತೆ ಚರ್ಚೆ ಮಾಡ್ತೇನೆ ಅಂತ ಸಿಎಂ ಹೇಳ್ತಾರೆ. ನೀರಾವರಿ ಸಚಿವರು ಯಾರನ್ನು ಕೇಳದೆ ನೀರು ಬಿಟ್ಟಿದ್ದಾರೆ ಮುಂದೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಕಳವಳ ವ್ಯಕ್ತಪಡಿಸಿದರು.
ಮಳೆ ಇಲ್ಲ, ತಮಿಳುನಾಡಿಗೆ ಮಳೆ ಇದೆ. ಸಂಕಷ್ಟದ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರನ್ನು ತಮಿಳುನಾಡು ಪಡೆದಿದೆ. ಇದಕ್ಕೆ ಸರ್ಕಾರ ಬಲಿಯಾಗುತ್ತಿದೆ. ತಕ್ಷಣವೇ ತಮಿಳುನಾಡಿಗೆ ಕಾವೇರಿ ನೀರನ್ನು ನಿಲ್ಲಿಸಬೇಕು ಎಂದು ಎಂಎಲ್ ಸಿ ಕೆ.ಟಿ.ಶ್ರೀಕಂಠೇಗೌಡ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಆತ್ಮಾನಂದ, ರೈತ ಹೋರಾಗಾರ್ತಿ ಸುನಂದಾ ಜಯರಾಂ ಸೇರಿದಂತೆ ಇತರರು ಭಾಗಿಯಾಗಿದ್ದರು.