ಬೆಂಗಳೂರು: ಎರಡು ಬಾರಿ ನರೇಂದ್ರ ಮೋದಿ ನೇತೃತ್ವದ ಸ್ಥಿರ ಸರ್ಕಾರದ ರಚನೆಯಿಂದಾಗಿ ದೇಶ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಮತ್ತೊಮ್ಮೆ ಮೋದಿ ಸರ್ಕಾರವನ್ನೇ ದೇಶದ ಜನತೆ ಬಯಸಿದ್ದಾರೆ, ಮತದಾನಕ್ಕಾಗಿ ಕಾಯುತ್ತಿದ್ದಾರೆ” ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇಲ್ಲಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಮಾತನಾಡಿದ ಅವರು, ”೨೦೧೪, ೨೦೧೯ರ ಎರಡೂ ಚುನಾವಣೆಗಳು ದೇಶಕ್ಕೆ ಸ್ಥಿರ ಸರ್ಕಾರ ನೀಡಿದ್ದವು. ೨೦೦೯ರ ಚುನಾವಣೆಗೆ ಹೋಲಿಕೆ ಮಾಡಿದರೆ, ಹೆಚ್ಚು ಮತದಾನ ಆಗಿದೆ. ಪರಿಣಾಮ ಸುಸ್ಥಿರ ಸರ್ಕಾರ ಬಂದಿದೆ.
ಈ ಸ್ಥಿರ ಸರ್ಕಾರದಿಂದ ಸರ್ವಾಂಗೀಣ ಅಭಿವೃದ್ಧಿ ನಡೆದಿದೆ. ಕಳೆದ ೯ ವರ್ಷಗಳಲ್ಲಿ ಮತದಾರ ಮಾಡಿದ ಒಂದು ವೋಟ್ ಇವತ್ತು ದೇಶದಲ್ಲಿ ೫೦ ಕೋಟಿಗೂ ಹೆಚ್ಚು ಜನ್ ಧನ್ ಖಾತೆ ಓಪನ್ ಆಗಿದೆ. ಒಂದು ವೋಟ್‌ನಿಂದ ೪.೫ ಕೋಟಿ ಜನರಿಗೆ ಮನೆಗಳು ನಿರ್ಮಾಣ ಆಗಿವೆ. ಸ್ವಚ್ಛ ಭಾರತ್ ಅಭಿಯಾನ ನಡೆದಿದೆ. ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಸಿಕ್ಕಿದೆ. ಭಾರತ ಇವತ್ತು ಚಂದ್ರಯಾನದಲ್ಲಿ ಸಫಲವಾಗಿದೆ. ೯ ವರ್ಷದ ನಂತರ ೯೦೦ ರೂಪಾಯಿಗೆ ಸಿಲಿಂಡರ್ ಸಿಗುವಂತೆ ಮಾಡಲಾಗಿದೆ. ಉಜ್ವಲ ಯೋಜನೆಯಡಿ ಉಚಿತ ಎಲ್‌ಪಿಜಿ ೧೦ ಕೋಟಿ ಮಹಿಳೆಯರಿಗೆ ಲಾಭ ದೊರೆತಿದೆ” ಎಂದು ತಿಳಿಸಿದರು.
ಮತ್ತೊಮ್ಮೆ ಮೋದಿ ಸರ್ಕಾರವೇ ಬರಲಿದೆ : ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣೆ ದೃಷ್ಟಿಯಲ್ಲಿ ಅವಶ್ಯಕತೆ ಇದೆ. ರಾಜ್ಯದಲ್ಲಿ ಮತದಾರ ಹಿಂದಿನ ಎರಡು ಚುನಾವಣೆಯಲ್ಲಿ ಮೋದಿಯವರನ್ನು ಗೆಲ್ಲಿಸಿದ ಅಂತರದಲ್ಲಿ, ಮತ್ತೆ ೨೦೨೪ರ ಚುನಾವಣೆಯಲಿ ಗೆಲ್ಲಿಸಲು ಜನ ಕಾಯುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿದಾರೆ. ಈ ಸರ್ಕಾರದ ವೈಫಲ್ಯಗಳಿಂದ ಜನ ಬೇಸತ್ತಿದ್ದಾರೆ. ಕಾವೇರಿ ವಿಚಾರವಾಗಿ ಸರ್ಕಾರದ ಧೋರಣೆಯಿಂದ ಜನ ಬೇಸತ್ತಿದ್ದಾರೆ. ಎರಡು ಬಾರಿ ಕಾವೇರಿ ಅಥಾರಿಟಿ ಎದುರು ನಮಗೆ ಸೋಲಾಗಿದೆ.
ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಆಗಲಿದೆ. ನಮ್ಮ ಮಂಡ್ಯ ಭಾಗದಲ್ಲಿ ಒಂದು ಬೆಳೆ ಬೆಳೆಯಲು ಕಷ್ಟವಾಗಿದೆ. ತಮಿಳುನಾಡಿನಲ್ಲಿ ಮೂರು ಬೆಳೆ ಬೆಳೆಯಲಾಗುತ್ತಿದೆ. ಗ್ಯಾರಂಟಿ ಸುಳ್ಳು ಭರವಸೆ ಕೊಟ್ಟು ಜನರಿಗೆ ಮೋಸ ಮಾಡಲಾಗಿದೆ. ಬಿಜೆಪಿ ಪರ ಜನತೆ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಮತ್ತೊಮ್ಮೆ ಮೋದಿ ಸರ್ಕಾರವೇ ಬರಲಿದೆ” ಎಂದು ಅವರು ಹೇಳಿದರು.