ಶಿವಮೊಗ್ಗ: ವಿಮಾನಯಾನ ಆರಂಭದಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ದಿಯ ವಿನೂತನ ಅಧ್ಯಾಯ ಆರಂಭವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ದಿ ಸಚಿವರಾದ ಎಂ.ಬಿ.ಪಾಟೀಲ ನುಡಿದರು.
ಇಂದು ಸೋಗಾನೆಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಯಾನ ಕಾರ್ಯಾಚರಣೆ ಮತ್ತು ಅಧಿಕೃತ ಜಾಲತಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದು ರಾಜ್ಯದ ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ವಿಮಾನ ನಿಲ್ದಾಣವಾಗಿದ್ದು ರೂ.450 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ರಸಋಷಿ ಕುವೆಂಪು ಅವರ ಹೆಸರನ್ನು ಹೊರಲಿರುವ ಈ ವಿಮಾನ ನಿಲ್ದಾಣದಿಂದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಈ ಮೂಲಕ ಮಲೆನಾಡು ಮತ್ತು ಮಧ್ಯಮ ಕರ್ನಾಟಕದ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ಬೆಳವಣಿಗೆ ಆಗಲಿದೆ ಎಂದರು.
ಮುಂದಿನ ಒಂದು ವರ್ಷ ಕಾಲ ಶಿವಮೊಗ್ಗ- ಬೆಂಗಳೂರು ನಡುವೆ ಪ್ರಯಾಣಿಸುವ ಪ್ರತಿಯೊಬ್ಬರ ಟಿಕೆಟ್ ಮೇಲೆ ₹500 ರುಪಾಯಿ ರಾಜ್ಯ ಸರ್ಕಾರ ಸಬ್ಸಿಡಿ ನೀಡಲಿದೆ ಎಂದು ಸಚಿವರು ಘೋಷಿಸಿದರು. 779 ಎಕರೆ ವಿಸ್ತಾರದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣದಲ್ಲಿ ಮೂಲಯೋಜನೆಯ ವಿನ್ಯಾಸವನ್ನು ಪರಿಷ್ಕರಿಸಿ, ಏರ್‍ಬಸ್-320 ಮಾದರಿಯ ವಿಮಾನಗಳು ಕೂಡ ಬಂದಿಳಿಯುವ ಮತ್ತು ರಾತ್ರಿ ವೇಳೆ ಇಳಿಯುವ ಸೌಲಭ್ಯಗಳನ್ನು ಕೂಡ ಕಲ್ಪಿಸಲಾಗುತ್ತಿದೆ.
ಸದ್ಯಕ್ಕೆ ಇಲ್ಲಿಂದ ಬೆಂಗಳೂರಿಗೆ ಕನೆಕ್ಟಿಂಗ್ ವಿಮಾನಯಾನ ಸೇವೆ ಲಭ್ಯವಾಗಲಿದೆ. ಬೆಂಗಳೂರಿನಿಂದ ಚೆನ್ನೈ, ಮುಂಬೈ ಮತ್ತು ದೆಹಲಿಗೆ ತೆರಳಲಿರುವ ಇಂಡಿಗೋ ಸಂಸ್ಥೆಯ ವಿಮಾನಗಳ ಮೂಲಕ ಪ್ರಯಾಣವನ್ನು ಮುಂದುವರಿಸಬಹುದು. ಉಡಾನ್ ಯೋಜನೆಯಡಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸದ್ಯದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ ನಾನಾ ನಗರಗಳಿಗೆ ಇಲ್ಲಿಂದ ನೇರ ವಿಮಾನಯಾನ ಆರಂಭಿಸಲಾಗುವುದು ಎಂದ ಅವರು ರಾಜ್ಯ ಸರ್ಕಾರದಿಂದಲೇ ವಿಮಾನ ನಿಲ್ದಾಣ ನಿರ್ವಹಣೆ ಮಾಡುವ ಯೋಜನೆಯಿದ್ದು ಶಿವಮೊಗ್ಗ ವಿಮಾನ ನಿಲ್ದಾಣದಿಂದ ಪ್ರಥಮವಾಗಿ ನಿರ್ವಹಣೆ ಆರಂಭವಾಗಲಿದೆ. ಇದರಿಂದ ಸರ್ಕಾರಕ್ಕೆ ಆದಾಯ ಮತ್ತು ಆಸ್ತಿ ಉಳಿಯಲಿದೆ. ಈ ಕುರಿತು ಸಾಧಕ-ಬಾಧಕಗಳನ್ನು ತಿಳಿದು ಮುನ್ನಡೆಯುತ್ತೇವೆ. ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಮಾತನಾಡಿ, ವಿಮಾನ ನಿಲ್ದಾಣಕ್ಕಾಗಿ ಶ್ರಮಿಸಿದ ಎಲ್ಲ ಜನಪ್ರತಿನಿಧಿಗಳು ಮತ್ತು ಭೂಮಿ ನೀಡಿದ ರೈತರಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ, ಕೈಗಾರಿಕೆಗಳಿಗೆ ನೆರವು ಸೇರಿದಂತೆ ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಲಾಗುವುದು. ಹಾಗೂ ಜನಸಾಮಾನ್ಯರು, ಬಡವರು ವಿಮಾನ ನಿಲ್ದಾಣದಲ್ಲಿ ಹಾರಾಡುವ ವ್ಯವಸ್ಥೆ ಮಾಡುತ್ತೇವೆಂಬ ವಿಶ್ವಾಸ ಇದೆ ಎಂದ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಜಿಲ್ಲೆಯಲ್ಲಿ ಕೈಗಾರಿಕೆಗೆ ಹೆಚ್ಚಿನ ಸಹಕಾರ ನೀಡಲಿದ್ದಾರೆಂಬ ಭರವಸೆ ವ್ಯಕ್ತಿಪಡಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಬಹು ವರ್ಷಗಳ ವಿಮಾನ ನಿಲ್ದಾಣದ ಕನಸು ನಿಮ್ಮೆಲ್ಲರ ಬೆಂಬಲದಿಂದ ನನಸಾಗಿದೆ. ಕೈಗಾರಿಕೆ ಬೆಳವಣಿಗೆ, ಉದ್ಯೋಗ ಸೃಷ್ಟಿಗೆ ಉತ್ತಮ ಅವಕಾಶಗಳು ತೆರೆದುಕೊಳ್ಳಲಿವೆ. ನಿಲ್ದಾಣದಲ್ಲಿ ರಾತ್ರಿ ನಿಲ್ದಾಣಕ್ಕೂ ವ್ಯವಸ್ಥೆ ಆಗುತ್ತಿದ್ದು ಕೆಲವೇ ವರ್ಷಗಳಲ್ಲಿ ಈ ನಿಲ್ದಾಣ ಅಂತರಾಷ್ಟ್ರೀಯ ನಿಲ್ದಾಣ ಆಗುವುದರಲ್ಲಿ ಅನುಮಾನವಿಲ್ಲ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ದಿ ಸಚಿವರಾದ ಎಂ.ಬಿ ಪಾಟೀಲ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಶಿವಮೊಗ್ಗ, ಸಂಸದದಾದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಶಾಸಕ ಆರಗ ಜ್ಞಾನೇಂದ್ರ ಮುಂತಾದ ಗಣ್ಯರೊಂದಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.50ಕ್ಕೆ ಹೊರಟ ಚೊಚ್ಚಲ ವಿಮಾನವು 11.05ಕ್ಕೆ ಶಿವಮೊಗ್ಗಕ್ಕೆ ಬಂದಿಳಿಯುವುದರೊಂದಿಗೆ ಮಲೆನಾಡಿನಲ್ಲಿ ವಿಮಾನಯಾನದ ಹೊಸ ಅಧ್ಯಾಯ ಆರಂಭವಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ವಾಟರ್ ಸೆಲ್ಯೂಟ್ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಜೊತೆಗೆ ಬಂದಿಳಿದ ಎಲ್ಲ ಪ್ರಯಾಣಿಕರಿಗೂ ಸಚಿವ ಮಧು ಬಂಗಾರಪ್ಪ ಅವರಲ್ಲದೆ ವಿಮಾನ ನಿಲ್ದಾಣದ ಸಿಬ್ಬಂದಿ ಗುಲಾಬಿ ಹೂವು ಮತ್ತು ಸಿಹಿ ನೀಡಿ ಸ್ವಾಗತಿಸಿದರು.
ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ನೀಡಿದ ರೈತರ ಪರವಾಗಿ ಇಬ್ಬರು ರೈತರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಗೋಪಾಲಕೃಷ್ಣ ಬೇಳೂರು, ಆರಗ ಜ್ಞಾನೇಂದ್ರ ಶಾರದಾ ಪೂರ್ಯಾನಾಯ್ಕ, ವಿಧಾನ ಪರಿಷತ್ ಶಾಸಕರಾದ ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ ಮಾಜಿ ಶಾಸಕರಾದ ಕೆ.ಎಸ್.ಈಶ್ವರಪ್ಪ, ಮೂಲಸೌಕರ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಕೆಎಸ್‍ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಂ ಆರ್ ರವಿ, ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ, ವಿಮಾನ ನಿಲ್ದಾಣದ ನಿರ್ದೇಶಕ ಕ್ಯಾ.ಶಮಂತ್, ಡಿಎಸ್‍ಪಿ ಚಂದ್ರಶೇಖರ್ ಉಪಸ್ಥಿತರಿದ್ದರು.