ಮಂಡ್ಯ :- ಹಾಲಹಳ್ಳಿ ಸ್ಲಂ ಬೋರ್ಡ್ ಬಡಾವಣೆಯಲ್ಲಿ ದೇವಾಲಯದ ಮುಂಭಾಗ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ರಸ್ತೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಬಜರಂಗ ಸೇನೆ ಕರ್ನಾಟಕ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಮಂಡ್ಯದಲ್ಲಿ ಪ್ರತಿಭಟಿಸಿದರು.
ನಗರದ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಅಕ್ರಮ ರಸ್ತೆ ತೆರವಿಗೆ ಒತ್ತಾಯಿಸಿದರು.
ನಗರಸಭೆ ವ್ಯಾಪ್ತಿಯ ಹಾಲಹಳ್ಳಿ ಸ್ಲಂ ಬೋರ್ಡ್ ನಲ್ಲಿ ಕರು ಮಾರಿಯಮ್ಮ ದೇವಾಲಯ ಇದ್ದು, ದೇವಸ್ಥಾನದ ಪಕ್ಕದ ಜಾಗದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಂ ಧರ್ಮದವರು ಜಾಗ ಖರೀದಿ ಮಾಡಿದ್ದು, ಆ ಜಾಗಕ್ಕೆ ಹೋಗಲು ಖಾಸಗಿ ರಸ್ತೆ ಇದ್ದರೂ ಸಹ ಸರ್ಕಾರಿ ಜಾಗದಲ್ಲಿ ದೇವಾಲಯದ ಮುಂಭಾಗ ಅಕ್ರಮವಾಗಿ ರಸ್ತೆ ನಿರ್ಮಿಸಿ ಕಾಂಕ್ರೀಟ್ ಡೆಕ್ ಹಾಕಿದ್ದಾರೆ ಎಂದು ದೂರಿದರು.
ಸದರಿ ಪ್ರದೇಶಕ್ಕೆ ಹೊರಗಿನ ಪುಂಡರು ಆಗಮಿಸಿ ಇಲ್ಲಿನ ನಿವಾಸಿಗಳಿಗೆ ಬೆದರಿಕೆ ಹಾಕಿ ಅನುಚಿತವಾಗಿ ವರ್ತಿಸುತ್ತಿದ್ದಾರೆ,ಸ್ಲಂ ಬೋರ್ಡ್ಆಸ್ತಿಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಿರುವ ಬಗ್ಗೆ ದೂರು ನೀಡಿದ್ದರೂ ಸಹ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ದೇವಾಲಯದಲ್ಲಿ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುವ ಹಿನ್ನೆಲೆಯಲ್ಲಿ ಅನ್ಯ ಧರ್ಮೀಯರಿಂದ ತೊಂದರೆಯಾಗುವ ಸಂಭವ ಇರುವುದರಿಂದ ಕೂಡಲೇ ಎಚ್ಚೆತ್ತು ಅಕ್ರಮ ರಸ್ತೆಯನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿದರು. ಬಜರಂಗ ಸೇನೆಯ ಬಿ. ಮಂಜುನಾಥ್, ಹರ್ಷ, ಶಿವು, ಚೆಲುವ ರಾಜು, ಕೃಷ್ಣ ಶೆಟ್ಟಿ, ಸತೀಶ್ ಕುಮಾರ್, ಅನಿಲ್ ನೇತೃತ್ವ ವಹಿಸಿದ್ದರು.
