ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ ೩೫೨ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ನಿಮಿತ್ತ ತಿರುಪತಿ ತಿರುಮಲ ದೇವಸ್ಥಾನದಿಂದ ಮಂತ್ರಾಲಯಕ್ಕೆ ಆಗಮಿಸಿದ ಶೇಷ ವಸ್ತ್ರವನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಅಧಿಕಾರಿಗಳು, ಸಿಬ್ಬಂದಿಗಳು ಸ್ವಾಗತಿಸಿದರು. ಶ್ರೀ ಮಠದ ಆವರಣದಿಂದ ಸಕಲ ವಾದ್ಯಗಳ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶೇಷ ವಸ್ತ್ರವನ್ನು ಸ್ವೀಕರಿಸಿ ತಲೆಯ ಮೇಲೆ ಹೊತ್ತು ಮೂಲ ಬೃಂದಾವನ ಪ್ರದಕ್ಷಿಣೆ ಮಾಡುವ ಮೂಲಕ ರಾಯರಿಗೆಸಮರ್ಪಿಸಿದರು.
ನಂತರ ಶ್ರೀಗಳು ಮಾತನಾಡಿ, ಇಂದು ಭೂ ಲೋಕದ ಒಡೆಯ ಶ್ರೀನಿವಾಸ ಶೇಷ ವಸ್ತ್ರದ ಮೂಲಕ ಗುರುರಾಯರ ಸನ್ನಿಧಾನಕ್ಕೆ ಬಂದಿದ್ದಾನೆ. ಕಳೆದ ಅನೇಕ ವರ್ಷಗಳಿಂದ ಗುರುರಾಯರ ಆರಾಧನೆ ಸಮಯದಲ್ಲಿ ಪ್ರತಿ ವರ್ಷ ತಿರುಪತಿಯ ಶ್ರೀನಿವಾಸನ ಸನ್ನಿಧಿಯಿಂದ ಶೇಷ ವಸ್ತ್ರವನ್ನು ಅಲ್ಲಿನ ದೇವಸ್ಥಾನ ಆಡಳಿತ ಮಂಡಳಿ ತಪ್ಪದೇ ವಾಡಿಕೆಯನ್ನು ಪಾಲಿಸುತ್ತ ಬಂದಿದೆ. ನಾಡ ನುಡಿಯಂತೆ ದೇವರು ಎಂದರೆ ತಿರುಪತಿ ತಿಮ್ಮಪ್ಪ. ಗುರುಗಳು ಎಂದರೆ ಮಂತ್ರಾಲಯ ರಾಗಪ್ಪ ಎನ್ನುವ ಹಾಗೆ ತಿರುಪತಿ ಮಂತ್ರಾಲಯ ನಡುವೆ ಅವಿನಾವ ಸಂಬಂಧ ಹೊಂದಿದೆ ಎಂದರು.
ತಿರುಪತಿ ತಿರುಮಲ ದೇವಸ್ಥಾನ-ತಿರುಪತಿ ಜೆ.ಇ.ಒ.ಶ್ರೀ ವೀರ ಬ್ರಮಹೇಂದ್ರ ಮಾತನಾಡಿ ಇಂದು ಗುರುರಾಯರ ಮಧ್ಯಾರಾಧನೆ ಸಮಯದಲ್ಲಿ ತಿರುಪತಿಯಿಂದ ಶೇಷ ವಸ್ತ್ರ ನೀಡುವ ಪರಂಪರೆ ನಡೆದುಕೊಂಡು ಬಂದಿದ್ದು, ಇಂದು ನಾವು ತಿರುಪತಿಯಿಂದ ತಂದ ಶೇಷ ವಸ್ತ್ರವನ್ನು ಶ್ರೀಗಳ ಮೂಲಕ ಗುರುರಾಯರಿಗೆ ಅರ್ಪಿಸಿದ್ದೇವೆ ಎಂದರು.
ಪೂರ್ವಾರಾಧನೆ ಅಂಗವಾಗಿ ತಮಿಳುನಾಡಿನ ಶ್ರೀ ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನ ಹಾಗೂ ಆಂಧ್ರಪ್ರದೇಶದ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನದಿಂದ ಮಂತ್ರಾಲಯಕ್ಕೆ ತರಲಾದ ಶೇಷ ವಸ್ತ್ರವನ್ನು ಶ್ರೀಮಠದ ಆವರಣದಿಂದ ಸಕಲ ವಾಧ್ಯಗಳ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಶೇಷ ವಸ್ತ್ರವನ್ನು ಸ್ವೀಕರಿಸಿ ರಾಯರಿಗೆ ಸಮರ್ಪಿಸಿದರು. ನಂತರ ಶ್ರೀಗಳು ಮಾತನಾಡಿ, ಶ್ರೀರಂಗಂ-ಅಹೋಬಲ ಕ್ಷೇತ್ರದಿಂದ ಶೇಷ ವಸ್ತ್ರ ಬಂದಿದ್ದು ಗುರುರಾಯರಿಗೆ ಸಮರ್ಪಣೆಯಾಗಿದೆ. ಶೇಷವಸ್ತ್ರದ ಮೂಲಕ ರಾಯರಿಗೆ ದೇವರು ಅನುಗ್ರಹಿಸಿದ್ದಾರೆ. ಅಹೋಬಲ ಕ್ಷೇತ್ರದ ನರಸಿಂಹಸ್ವಾಮಿ ಹಾಗೂ ಶ್ರೀರಂಗಂ ಕ್ಷೇತ್ರದಲ್ಲಿ ಶ್ರೀಮಠ ಅನನ್ಯ ಸಂಬಂಧ ಹೊಂದಿದೆ ಎಂದ್ದಿದ್ದರು.