ಬೆಂಗಳೂರು: ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ (ಐಬಿಎಸ್‌ಎ) ವಿಶ್ವ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾವನ್ನು ಭಾರತೀಯ ಅಂಧರ ತಂಡ ಮಣಿಸಿ ಚಿನ್ನ ಗೆದ್ದು ಸಾಧನೆ ಮಾಡಿದೆ. ಲಂಡನ್ ಬರ್ನಿಂಗ್ ಹ್ಯಾಂನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡ ಪ್ರತಿನಿಧಿಸಿದ ಆಟಗಾರ್ತಿಯರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ. ಅದರಲ್ಲೂ ಕರ್ನಾಟಕ ಮೂಲದ ಯುವತಿ ವರ್ಷಾ ನಾಯಕತ್ವದಲ್ಲಿ ಮಹಿಳಾ ತಂಡ ಚಿನ್ನ ಗೆದ್ದಿದೆ.
ಪಂದ್ಯದಲ್ಲಿ ಅಭೂತ ಪೂರ್ವ ಸಾಧನೆ ಮಾಡಿದ ಭಾರತ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರ್ತಿಯರು ಭಾಗವಹಿಸಿದ್ದರು. ಅವರು ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ, ದೇಶ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದ ಯುವತಿಯರನ್ನು ಏರ್ಪೋಟ್ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಕಳೆದ ತಿಂಗಳು ೧೭ ರಿಂದ ೨೬ ರವರೆಗೂ ಲಂಡನ್‌ನಲ್ಲಿ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ (ಐಬಿಎಸ್‌ಎ) ವಿಶ್ವ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾರತದ ಪುರುಷ ಮತ್ತು ಮಹಿಳೆಯರ ತಂಡ ಕ್ರಿಕೆಟ್‌ನಲ್ಲಿ ಭಾಗವಹಿಸಿತ್ತು. ವನಿತೆಯರು ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನ ಗೆದ್ದರೆ, ಪುರುಷರ ತಂಡ ಪಾಕಿಸ್ತಾನದ ವಿರುದ್ಧ ಮಣಿದು ಬೆಳ್ಳಿಗೆ ತೃಪ್ತಿ ಪಡಬೇಕಾಯಿತು.
ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಂಡ ಮೂವರು ಆಟಗಾರರರಿಗೆ ಸಮರ್ಥನಾ ಅಂಗವಿಕಲರ ಸಂಸ್ಥೆ ಮತ್ತು ಕ್ರಿಕೆಟ್ ಅಸೋಸಿಯೇಷನ್ ಪಾರ್ ದಿ ಬ್ಲೈಂಡ್ ಇನ್ ಇಂಡಿಯಾ ಸಂಸ್ಥೆಯಿಂದ ಗೌರವಿಸಲಾಯಿತು. ತಂಡದ ನಾಯಕಿ ವರ್ಷಾ ಮಾತನಾಡಿ,ಫೈನಲ್‌ನಲ್ಲಿ ಭಾರತದ ಪರ ಆಡುರುವುದು ಹೆಮ್ಮೆಯಾಗಿದೆ. ಎಲ್ಲರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಭಾರತಕ್ಕಾಗಿ ಇನ್ನಷ್ಟೂ ಪದಕ ಗೆಲ್ಲುವ ಗುರಿ ನನ್ನದು. ಟೀಮ್ ಮ್ಯಾನೇಜರ್ ಶಿಕಾ ಶೆಟ್ಟಿ ಮಾತನಾಡಿ, ಭಾಗವಹಿಸಿದ್ದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡ ಅನುಭವದಿಂದ ಕೂಡಿತ್ತು. ನಮ್ಮ ತಂಡಕ್ಕೆ ಇದು ಹೊಸ ಅನುಭವ. ಆದರೂ ಹಿಂಜರಿಯದೇ ತಮ್ಮ ಉತ್ತಮ ಪ್ರದರ್ಶನದ ಮೂಲಕ ಚಿನ್ನ ಗೆದ್ದಿದ್ದಾರೆ ಎಂದರು.