Monday, April 21, 2025
Google search engine

Homeಸ್ಥಳೀಯಸೆ. 9ರಂದು ಜಿಲ್ಲೆಯಾದ್ಯಂತ ಮೆಗಾ ಲೋಕ್ ಅದಾಲತ್

ಸೆ. 9ರಂದು ಜಿಲ್ಲೆಯಾದ್ಯಂತ ಮೆಗಾ ಲೋಕ್ ಅದಾಲತ್

ಚಾಮರಾಜನಗರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸೆಪ್ಟೆಂಬರ್ 9ರಂದು ಜಿಲ್ಲೆಯಾದ್ಯಂತ ಮೆಗಾ ಲೋಕ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.

ನಗರದ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದ ಸಭಾಂಗಣದಲ್ಲಿಂದು ಲೋಕ್ ಅದಾಲತ್ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದನ್ವಯ ಸೆಪ್ಟೆಂಬರ್ 9ರಂದು ರಾಜ್ಯಾದ್ಯಂತ ಮೆಗಾ ಲೋಕ್ ಅದಾಲತ್ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕು ನ್ಯಾಯಾಲಯಗಳಲ್ಲಿ ಬೈಟಕ್‍ಗಳನ್ನು ಏರ್ಪಡಿಸಿ ಸಂಧಾನಕಾರರನ್ನು ನೇಮಿಸಿ ಆಯಾ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ಏರ್ಪಡಿಸಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಹೊರತುಪಡಿಸಿ, ಇತರೆ ಯಾವುದೇ ರೀತಿಯ ಸಿವಿಲ್ ಪ್ರಕರಣಗಳು, ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ದಾಂಪತ್ಯ ಹಕ್ಕುಗಳ ಪುನರ್ ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು, ಮೋಟಾರ್ ವಾಹನ ಅಪಘಾತಕ್ಕೆ ಸಂಬಂಧಪಟ್ಟ ಪ್ರಕರಣಗಳು, ಕೈಗಾರಿಕಾ ವಿವಾದ ಕಾಯ್ದೆ ಅಡಿಯಲ್ಲಿರುವ ಪ್ರಕರಣಗಳು ಹಾಗೂ ಇತರೆ ಎಲ್ಲಾ ಸ್ವರೂಪದ ಪ್ರಕರಣಗಳು ಮತ್ತು ರಾಜೀ ಯೋಗ್ಯ ಕ್ರಿಮಿನಲ್ ಪ್ರಕರಣಗಳು, ವಿಶೇಷ ಕಾನೂನಿನಿಂದ ಶಿಕ್ಷಿಸಲ್ಪಡುವ ಅಪರಾಧಗಳಾದ ಚೆಕ್ಕು ಅಮಾನ್ಯ ಪ್ರಕರಣಗಳು, ಕಾರ್ಮಿಕ ಕಾಯ್ದೆಯಲ್ಲಿ ಬರತಕ್ಕಂತಹ ಪ್ರಕರಣಗಳು, ವಿದ್ಯುಚ್ಛಕ್ತಿ ಕಾಯ್ದೆ ಅಡಿಯಲ್ಲಿ ವಿದ್ಯುತ್ ಕಳವಿಗೆ ಸಂಬಂಧಿಸಿದ ಪ್ರಕರಣಗಳು, ಅಕ್ರಮ ಕಲ್ಲು, ಮರಳು ಸಾಗಾಣಿಕೆಗೆ ಸಂಬಂಧಪಟ್ಟ ಅಪರಾಧಗಳು, ಇತರೆ ಯಾವುದೇ ರಾಜಿ ಯೋಗ್ಯ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಬಹುದು. ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ಲೋಕ್ ಅದಾಲತ್ ನಲ್ಲಿ ರಾಜಿ ಮಾಡಿಕೊಳ್ಳುವ ಅವಕಾಶ ಕಲ್ಪಿಸಿರುವುದರಿಂದ, ನ್ಯಾಯಾಲಯಕ್ಕೆ ದಾಖಲಿಸುವ ಪೂರ್ವದಲ್ಲಿ ಸಮಾಲೋಚನೆಯಲ್ಲಿ ರಾಜೀ ಮಾಡಿಕೊಳ್ಳಬಹುದು ಎಂದು ನ್ಯಾಯಾಧೀಶರು ತಿಳಿಸಿದರು.

ಪಕ್ಷಗಾರರು ಖುದ್ದಾಗಿ ಹಾಗೂ ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳಬಹುದಾಗಿದೆ. ಲೋಕ ಅದಾಲತ್‍ನಲ್ಲಿ ಹೆಚ್ಚೆಚ್ಚು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವ ಸಲುವಾಗಿ ವಿಮಾ ಕಂಪನಿಗಳು, ಭೂ ಸ್ವಾಧೀನಾಧಿಕಾರಿಗಳು, ಬ್ಯಾಂಕುಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೆÇಲೀಸ್ ಇಲಾಖೆ, ನ್ಯಾಯಾಧೀಶರು ಹಾಗೂ ವಕೀಲರು, ಕಂದಾಯ ಇಲಾಖೆ, ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಪ್ರತಿದಿನ ಹಾಗೂ ಎಲ್ಲಾ ನ್ಯಾಯಾಲಯಗಳಲ್ಲಿ ನಿತ್ಯ ಲೋಕ್ ಅದಾಲತ್ ಪೂರ್ವಭಾವಿ ಸಮಾಲೋಚನಾ ಸಭೆ ಏರ್ಪಡಿಸುತ್ತಿದ್ದು, ರಾಜೀ ಯೋಗ್ಯ ಪ್ರಕರಣಗಳಲ್ಲಿ ಎರಡೂ ಪಕ್ಷಾಕಾರರನ್ನು ಕರೆಸಿ ಪೂರ್ವಭಾವಿ ಸಮಾಲೋಚನೆಯನ್ನು ನಡೆಸಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಬಂಧಪಟ್ಟ ಪ್ರತಿಯೊಬ್ಬ ಪಕ್ಷಗಾರರು ಲೋಕ್ ಅದಾಲತ್ ಸೌಲಭ್ಯವನ್ನು ಪಡೆದುಕೊಳ್ಳುವಂತೆ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

RELATED ARTICLES
- Advertisment -
Google search engine

Most Popular