ಕಡಬ : ವಿದ್ಯುತ್ ತಂತಿಗೆ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳವನ್ನು ಪವರ್‌ಮ್ಯಾನ್ ರಕ್ಷಣೆ ಮಾಡಿ ಮಾನವೀಯತೆ ಮೆರೆದ ಘಟನೆ ಇಂದು ಬೆಳಗ್ಗೆ ಕಡಬದಲ್ಲಿ ನಡೆದಿದೆ. ಮೆಸ್ಕಾಂನ ಸಿಟಿ ಫೀಡರ್ ಪವರ್‌ಮ್ಯಾನ್ ಪಿ.ಜೆ ಗುರುಮೂರ್ತಿ ಎಂಬುವರು ಪಾರಿವಾಳ ರಕ್ಷಣೆ ಮಾಡಿದ್ದಾರೆ.
ಇಂದು ಬೆಳಗ್ಗೆ ಕಡಬ ಪೇಟೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಪಾರಿವಾಳವೊಂದು ವಿದ್ಯುತ್ ತಂತಿಯಲ್ಲಿ ಒದ್ದಾಡುತ್ತಿತ್ತು. ಆಹಾರ ಅರಸುತ್ತಾ ಬಂದ ಪಕ್ಷಿಯ ಕಾಲಿಗೆ ಪ್ಲಾಸ್ಟಿಕ್ ದಾರವೊಂದು ಸಿಕ್ಕಿಹಾಕಿಕೊಂಡಿದ್ದು, ನಂತರ ವಿದ್ಯುತ್ ತಂತಿಯ ಮೇಲೆ ಕುಳಿತಿತ್ತು. ಈ ವೇಳೆ ಕಾಲಿಗೆ ಸಿಲುಕಿದ ಪ್ಲಾಸ್ಟಿಕ್ ಹಗ್ಗವು ವಿದ್ಯುತ್ ತಂತಿಗೆ ಸುತ್ತಿಕೊಂಡು ಪಾರಿವಾಳ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿತ್ತು.
ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ಕೂಡಲೇ ಸ್ಧಳಕ್ಕೆ ಆಗಮಿಸಿ ಗಮನಿಸಿದ ಪವರ್‌ಮ್ಯಾನ್ ಗುರುಮೂರ್ತಿ ಅವರು ಮೊದಲು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು. ನಂತರ ಕಂಬವೇರಿ ಪಾರಿವಾಳವನ್ನು ರಕ್ಷಣೆ ಮಾಡಿದರು. ಪಾರಿವಾಳವನ್ನು ಕೆಳಗಡೆ ತಂದು ಅದರ ಕಾಲಿನಿಂದ ಪ್ಲಾಸ್ಟಿಕ್ ದಾರ ತೆಗೆದು ಸ್ವತಂತ್ರವಾಗಿ ಹಾರಲು ಅನುವು ಮಾಡಿಕೊಟ್ಟರು. ಗುರುಮೂರ್ತಿಯವರ ಈ ರಕ್ಷಣಾ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.