Sunday, April 20, 2025
Google search engine

Homeರಾಜ್ಯಬಳ್ಳಾರಿಯಲ್ಲಿ ತಾಂತ್ರಿಕ ಕಾಲೇಜು ಸ್ಥಾಪನೆಗೆ 5 ಎಕರೆ ಜಾಗ ಮೀಸಲು: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ

ಬಳ್ಳಾರಿಯಲ್ಲಿ ತಾಂತ್ರಿಕ ಕಾಲೇಜು ಸ್ಥಾಪನೆಗೆ 5 ಎಕರೆ ಜಾಗ ಮೀಸಲು: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ

ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಬಳ್ಳಾರಿ: ಜಿಲ್ಲೆಯಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಉತ್ತೇಜನ ನೀಡಲು ಬಳ್ಳಾರಿಯಲ್ಲಿ ಸರ್ಕಾರಿ ತಾಂತ್ರಿಕ ಕಾಲೇಜು ಸ್ಥಾಪನೆಗೆ 5 ಎಕರೆ ಜಾಗ ಮೀಸಲಿರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ರೇಡಿಯೋ ಪಾರ್ಕ್‍ನ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತ.

ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಬಹಳಷ್ಟು ಆದ್ಯತೆ ನೀಡಲಾಗುತ್ತಿದೆ. ಬಳ್ಳಾರಿಯಲ್ಲಿ ಈಗಾಗಲೇ ಸರ್ಕಾರಿ ತಾಂತ್ರಿಕ ಶಾಲೆಯಿದ್ದು, ಅದರಂತೆಯೇ ತಾಂತ್ರಿಕ ಶಿಕ್ಷಣ ಕಾಲೇಜು ಸ್ಥಾಪನೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ನಗರದಲ್ಲಿ 5 ಎಕರೆ ಜಾಗ ಗುರುತಿಸಲಾಗಿದೆ. ಅಲ್ಲದೆ ಪದವಿಪೂರ್ವ ಶಿಕ್ಷಣ ಇಲಾಖೆಯ ಸಚಿವರೊಂದಿಗೂ ಚರ್ಚಿಸಲಾಗುವುದು ಎಂದರು.

ಮುಂದೆ ಡಿಪ್ಲೊಮಾ ಪದವಿ ಶಿಕ್ಷಣ ಪಡೆಯಲು ತಾಂತ್ರಿಕ ವಿದ್ಯಾಲಯದಲ್ಲಿ ಅಭ್ಯಸಿಸುವಂತಹ ಮಕ್ಕಳಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದೆ ಉಜ್ವಲ ಭವಿಷ್ಯವಿದೆ. ನಮ್ಮ ಭಾಗದಲ್ಲಿ ಹಲವಾರು ಕೈಗಾರಿಕೆಗಳು ಇವೆ. ಇದರಿಂದ ತಾಂತ್ರಿಕ ಶಿಕ್ಷಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳು  ಪೂರ್ಣಪ್ರಮಾಣದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಇರುವಂತಹ ನ್ಯೂನತೆಗಳ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸರ್ಕಾರದ ಗಮನಕ್ಕೆ ತಂದು ಶೈಕ್ಷಣಿಕವಾಗಿ ಜಿಲ್ಲೆಯನ್ನು ಮುಂಚೂಣಿಯಲ್ಲಿರಿಸುವುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ರುದ್ರ ಟ್ರಸ್ಟ್‍ನ ಸಂಸ್ಥಾಪಕ ರವಿಶಂಕರ್ ಗುರೂಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ 180 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್,  ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಪ್ರಾಂಶುಪಾಲ ನಾಗರಾಜ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular