ಮಂಡ್ಯ: ನಿಮ್ಮ ಸಖ್ಯಕ್ಕೆ ಕಾವೇರಿ ನೀರು ಬಿಡ್ತಿದ್ದೀರಾ. ಸ್ಟ್ಯಾಲಿನ್ ಓಲೈಕೆಗೆ ಬಿಟ್ಟಿರುವ ನೀರನ್ನ ಕೂಡಲೇ ನಿಲ್ಲಿಸಿ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ.
ಸಿಲ್ವರ್ ಜುಬಿಲಿ ಪಾರ್ಕ್ ನಿಂದ ಡಿಸಿ ಕಚೇರಿ ವರೆಗೆ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಸದೆ ಸುಮಲತಾ ಕೂಡ ಹೋರಾಟದಲ್ಲಿ ಭಾಗವಹಿಸಬೇಕು. ರಾಜೀನಾಮೆ ಸಲ್ಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಜಿಲ್ಲೆ ಶಾಸಕರಿಗೆ, ಸಂಸದರಿಗೆ ರವೀಂದ್ರ ಶ್ರೀಕಂಠಯ್ಯ ಕರೆ ನೀಡಿದ್ದಾರೆ.
ಕಾವೇರಿಗಾಗಿ ಹೆಚ್.ಡಿ.ದೇವೇಗೌಡರು ಪೂಜೆ ಮಾಡ್ತಿದ್ದಾರೆ. ಈ ಸರ್ಕಾರ ರೈತರನ್ನ ಉಳಿಸಲ್ಲ, ನೀವು ಹೋರಾಟಕ್ಕೆ ಹೋಗಿ ಎಂದು ನನ್ನನ್ನ ಕಳುಹಿಸಿದ್ದಾರೆ ಎಂದರು.
ಮಂಡ್ಯ ಜಿಲ್ಲೆ ಬೆಂಕಿ ಚೆಂಡು ಇದ್ದಂಗೆ. ಮಂಡ್ಯ ಬೆಂಕಿ ಚೆಂಡನ್ನು ವಿಧಾನ ಸೌದಕ್ಕೆ ಎಸಿತೀವಿ. ಚೆಂಡು ಎಸೆದ್ರೆ ಎಲ್ಲರೂ ಉರಿದುಹೋಗ್ತಿರಿ ಎಂದು ಮಾಜಿ ಶಾಸಕ ಅನ್ನದಾನಿ ಕಿಡಿಕಾರಿದ್ದಾರೆ.
ಕದ್ದು ನೀರು ಬಿಟ್ರೆ ನಿಮ್ಮನ್ನ ಕಳ್ಳ ಸರ್ಕಾರ ಅನ್ನಬೇಕಾಗುತ್ತೆ. ರಾತ್ರಿ 9 ಗಂಟೆಯ ನಂತರ ಕದ್ದು ನೀರು ಬಿಡ್ತಿರಿ. ತಾಕತ್ತು ಇದ್ರೆ ಬೆಳಿಗ್ಗೆಹೊತ್ತು ನೀರು ಬಿಡಿ ನೋಡೋಣ ಎಂದು ಕಿಡಿಕಾರಿದರು.
ಡಿಸಿಗೆ ಜೆಡಿಎಸ್ ನಾಯಕರ ಮನವಿ
ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ನಾಯಕರು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಶಾಸಕ ಹೆಚ್.ಟಿ.ಮಂಜು ಸೇರಿದಂತೆ ಅನೇಕರು ಭಾಗಿಯಾಗಿದ್ದರು.