ಚಾಮರಾಜನಗರ: ಸನಾತನ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ತಮಿಳುನಾಡಿನ ಸಚಿವ ಉದಯನಿಧಿ ಅವರನ್ನು ಬಂಧಿಸಿ, ಮೊಕದ್ದಮೆ ದಾಖಲಿಸಬೇಕು ಎಂದು ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಆಗ್ರಹಿಸಿದರು.
ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಮಾತನಾಡಿ, ಸನಾತನ ಧರ್ಮ ಕೊರೊನಾ, ಡೆಂಘಿ ಇದ್ದಂತೆ ಎಂದು ಹೇಳಿಕೆ ಕೊಟ್ಟಿರುವುದು ಖಂಡನೀಯ, ಸನಾತನ ಧರ್ಮ ಎಂದರೆ ನಿನ್ನೆ- ಮೊನ್ನೆ ಹುಟ್ಟಿದ್ದಲ್ಲ, ಉದಯನಿಧಿ ಅಂತಹವರು ಕೋಟಿ ಮಂದಿ ಹುಟ್ಟಿದರೂ ಹಿಂದೂ ಧರ್ಮವನ್ನು ಕಿತ್ತುಹಾಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಎಲ್ಲಾ ಧರ್ಮಗಳಿಗೂ ಅದರದೇ ಗೌರವವಿದೆ, ಎಲ್ಲ ಧರ್ಮವನ್ನು ಗೌರವಯುತವಾಗಿ ಕಾಣಬೇಕು, ಎಲ್ಲ ಧರ್ಮವನ್ನು ಪ್ರೀತಿಸಬೇಕು. ಅದನ್ನು ಬಿಟ್ಟುಆ ಧರ್ಮ ಸರಿಯಿಲ್ಲ- ಈ ಧರ್ಮ ಸರಿಯಿಲ್ಲ ಎನ್ನುವುದು ಸರಿಯಲ್ಲ. ಕೂಡಲೇ ಉದಯನಿಧಿಯನ್ನು ಬಂಧಿಸಿ, ಮೊಕದ್ದಮೆ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ೬ನೇ ದಿನಕ್ಕೆ ಪ್ರತಿಭಟನೆ ಕಾಲಿಟ್ಟಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕರ್ನಾಟಕಕ್ಕೆ ಕುಡಿಕೆ ನೀರು ಸಿಕ್ಕಿದೆ ಎಂದು ಆರೋಪಿಸಿ ಕುಡಿಕೆಯಲ್ಲಿ ನೀರನ್ನು ಹಿಡಿದು ಪ್ರತಿಭಟನೆ ನಡೆಸಿ ತಮಿಳುನಾಡಿಗೆ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿದರು. ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆದು ಕುಡಿಕೆಯಲ್ಲಿ ನೀರು ಹಿಡಿದು ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.