ಹುಬ್ಬಳ್ಳಿ: ಇಂದಿನಿಂದ ೩ ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ನಡೆಯಲಿದೆ ಎಂದು ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಬರಗಾಲ ಛಾಯೆಯ ಬಗ್ಗೆ ಹವಾಮಾನ ವರದಿ ಮುನ್ಸೂಚನೆ ನೀಡಿತ್ತು. ಕೇಂದ್ರದ ಭೂವಿಜ್ಞಾನ ಸಚಿವಾಲಯ ಸಾಕಷ್ಟು ರಿಸರ್ಚ್ ಮಾಡಿತ್ತು. ಮಳೆ ಬರುವುದು ಖಚಿತ ಅನ್ನುವ ಮಾಹಿತಿಯಿಂದ ಮೋಡ ಬಿತ್ತನೆ ಮಾಡಲಾಗಿದೆ. ರಾಣೆಬೆನ್ನೂರು ಕ್ಷೇತ್ರದರೈತರು ಅವಶ್ಯಕತೆ ಇದೆ ಅಂತಾ ಹೇಳಿದ್ದಾರೆ. ಹೀಗಾಗಿ ನಾವು ಮೋಡ ಬಿತ್ತನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮೋಡ ಬಿತ್ತನೆಗೆ ಸಿಎಂ ಸಿದ್ದರಾಮಯ್ಯನವರು ಅನುಮತಿ ಕೊಟ್ಟಿದ್ದಾರೆ. ಮೋಡ ಬಿತ್ತನೆಯಿಂದ ಶೇ.೨೮ರಷ್ಟು ಮಳೆ ಆಗುತ್ತೆ ಎನ್ನಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಮಾತ್ರ ಮೋಡ ಬಿತ್ತನೆ ಕಾರ್ಯ ಮಾಡುತ್ತಿದ್ದೇವೆ. ನಮ್ಮದೇ ಸ್ವಂತ ವಿಮಾನ ಇರುವುದರಿಂದ ಖರ್ಚು ಕಡಿಮೆ ಆಗುತ್ತೆ. ೧೫ರಿಂದ ೨೦ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮುಗಿಯಲಿದೆ ಎಂದು ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹಾವೇರಿ ಜಿಲ್ಲೆಯತ್ತ ಮೋಡ ಬಿತ್ತನೆ ವಿಮಾನ ಹೊರಟಿದೆ. ಪಿ.ಕೆ.ಕೆ.ಇನಿಷಿಯೇಟೆವ್ಸ್ ಅಡಿಯಲ್ಲಿ ಮೋಡ ಬಿತ್ತನೆ ಮಾಡಲಾಗಿದ್ದು, ಇಂದಿನಿಂದ ಮೂರು ದಿನಗಳ ಹಾವೇರಿ ಜಿಲ್ಲೆಯ ಎಲ್ಲಾ ಕಡೆ ಆಗಸದಲ್ಲಿ ವಿಶೇಷ ವಿಮಾನದ ಮೂಲಕ ಮೋಡ ಬಿತ್ತನೆ ನಡೆಯಲಿದೆ. ಮೋಡ ಬಿತ್ತನೆ ವಿಫಲವಾಗಿಲ್ಲ ಎಂದ ಸಚಿವ ಹೆಚ್.ಕೆ.ಪಾಟೀಲ್
ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಮೋಡ ಬಿತ್ತನೆ ವಿಫಲವಾಗಿಲ್ಲ. ರಾಜ್ಯದ ಜನರಿಗೆ ಒಳಿತು ಮಾಡಲು ಮೋಡ ಬಿತ್ತನೆ ಮಾಡಿದ್ದೇವೆ. ಹಾವೇರಿ, ರಾಣೆಬೆನ್ನೂರು ತಾಲೂಕಿನ ಗುಣಮಟ್ಟ ನೋಡಿ ಬಿತ್ತನೆ ಮಾಡುತ್ತೇವೆ. ಶಾಸಕ ಪ್ರಕಾಶ್ ಕೋಳಿವಾಡಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಗದಗ ಜಿಲ್ಲೆಯಲ್ಲೂ ಮೋಡ ಬಿತ್ತನೆ ಮಾಡಿ ಅಂತಾ ಹೇಳಿದ್ದೇನೆ ಎಂದರು.