Saturday, April 19, 2025
Google search engine

Homeಸ್ಥಳೀಯಮೈಸೂರು ದಸರಾ ೨೦೨೩: ಗಜಪಡೆಗೆ ಅದ್ಧೂರಿ ಸ್ವಾಗತ

ಮೈಸೂರು ದಸರಾ ೨೦೨೩: ಗಜಪಡೆಗೆ ಅದ್ಧೂರಿ ಸ್ವಾಗತ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ೨೦೨೩ ಮಹೋತ್ಸವಕ್ಕೆ ಅರಮನೆ ನಗರಿ ಸಜ್ಜಾಗುತ್ತಿದ್ದು, ಇಂದು (ಸೆ.೦೫) ಅರಮನೆಯಂಗಳಕ್ಕೆ ಗಜಪಡೆ ಆಗಮಿಸಿತು.

ಸಾಂಸ್ಕೃತಿಕ ನಗರಿಯಲ್ಲಿ ದಸರಾ ವೈಭವ ಕಳೆಗಟ್ಟಿದ್ದು, ಮೈಸೂರು ಅರಮನೆ ಮಂಡಳಿ ವತಿಯಿಂದ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ದೊರೆಯಿತು. ಇಂದು ಮಂಗಳವಾರ ಮಧ್ಯಾಹ್ನ ೧೨.೦೧ಕ್ಕೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ೯ ಆನೆಗಳು ಅರಮನೆಗೆ ಆಗಮಿಸಿದವು. ನಂತರ ಅಭಿಜಿನ್ ಲಗ್ನದಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು.

ಗಜಪಡೆಯನ್ನು ೧೫ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಅಭೂತಪೂರ್ವ ಸ್ವಾಗತದೊಂದಿಗೆ ಬರಮಾಡಿಕೊಂಡವು. ಆನೆಗಳನ್ನು ಮೆರವಣಿಗೆಯಲ್ಲಿ ಕೆಲ ದೂರ ಕರೆದೊಯ್ಯಲಾಯಿತು. ಈ ವೇಳೆ ಆನೆಗಳ ಎದರು ವಿವಿಧ ವಾದ್ಯಗಳನ್ನು ಬಾರಿಸಲಾಯಿತು.
ಈ ಬಾರಿ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ೧೪ ಆನೆಗಳು ಭಾಗಿಯಾಗಲಿವೆ. ಕ್ಯಾಪ್ಟನ್ ಅಭಿಮನ್ಯು ಈ ಬಾರಿಯೂ ಅಂಬಾರಿಯನ್ನು ಹೊರಲಿದ್ದಾನೆ. ನಿಶಾನೆ ಆನೆಯಾದ ಅರ್ಜುನ ಜಂಬೂಸವಾರಿಯಲ್ಲಿ ೨೨ ವರ್ಷಗಳ ಕಾಲ ಭಾಗವಹಿಸಿದ ಅನುಭವವಿದೆ. ಈ ಹಿಂದೆ ಅಂಬಾರಿ ಹೊರುತ್ತಿದ್ದನಾದರೂ ಈ ಬಾರಿ ನಿಶಾನೆ ಆನೆಯಾಗಿ ಕಾರ್ಯನಿರ್ವಹಿಸಲಿದ್ದಾನೆ.

ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ, ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಎಸ್.ಪಿ ಸೀಮಾ ಲಾಟ್ಕರ್, ಡಿಸಿಪಿ ಮುತ್ತುರಾಜ್ ಜಾನ್ಹವಿ, ಡಿಸಿಎಫ್ ಸೌರಭ್ ಕುಮಾರ್, ಸಂಸದ ಪ್ರತಾಪಸಿಂಹ, ಶಾಸಕರಾದ ಶ್ರೀವತ್ಸ ಹರೀಶ್ ಗೌಡ, ಎಂಎಲ್‌ಸಿ ಸಿ.ಎನ್ ಮಂಜೇಗೌಡ ಮೇಯರ್ ಶಿವಕುಮಾರ್, ಅರಮನೆ ಉಪನಿರ್ದೇಶಕ ಟಿ.ಎಸ್ ಸುಬ್ರಮಣ್ಯ ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular