Monday, April 21, 2025
Google search engine

Homeರಾಜ್ಯಸುದ್ದಿಜಾಲಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಪ್ರಮುಖ : ಶಾಸಕ ಎ.ಆರ್. ಕೃಷ್ಣಮೂರ್ತಿ

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಪ್ರಮುಖ : ಶಾಸಕ ಎ.ಆರ್. ಕೃಷ್ಣಮೂರ್ತಿ

ಚಾಮರಾಜನಗರ: ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣ ಅಗತ್ಯವಿದ್ದು ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಅಭಿಪ್ರಾಯಪಟ್ಟರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಕ್ಷಣದ ಗುಣಮಟ್ಟ, ಮೌಲ್ಯ ಇನ್ನೂ ಹೆಚ್ಚಳವಾಗಬೇಕಿದೆ. ಶಿಲೆಯನ್ನು ಕೆತ್ತಿ ಸುಂದರ ಮೂರ್ತಿಯಾಗಿಸುವ ಶಿಲ್ಪಿಯಂತೆ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಯಾಗಿಸಿ ರೂಪುಗೊಳಿಸುವ ಶಿಕ್ಷಕರ ಜವಾಬ್ದಾರಿಯು ಅತ್ಯಂತ ಮಹತ್ವದಾಗಿದೆ. ಆರ್ಥಿಕ, ಸಾಮಾಜಿಕವಾಗಿ ಸ್ವಾವಲಂಬಿ ಬದುಕು ನಡೆಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಮೂಲಕ ಅಭಿವೃದ್ದಿಯಲ್ಲಿ ಭಾಗಿಯಾಗುವ ಶಿಕ್ಷಕರ ಪಾತ್ರ ಬಹುದೊಡ್ಡದು ಎಂದು ಶಾಸಕರು ತಿಳಿಸಿದರು.

ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು. ಡಾ. ಸರ್ವಪಲ್ಲಿ ರಾಧಕೃಷ್ಣನ್ ಅವರ ಆದರ್ಶ ಮಾದರಿಯಾಗಿದೆ. ರಾಧಕೃಷ್ಣನ್ ಅವರನ್ನು ವಿದ್ಯಾರ್ಥಿಗಳು ಮೈಸೂರಿನ ರೈಲು ನಿಲ್ದಾಣದವರೆಗೆ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆದೊಯ್ದು ಬೀಳ್ಕೊಡುಗೆ ನೀಡಿದ ಅವಿಸ್ಮರಣೀಯ ಸಂದರ್ಭ ಅಭಿಮಾನ ಪಡುವಂತಾಗಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಉತ್ತಮ ಬಾಂಧವ್ಯಕ್ಕೆ ಇದು ಸಾಕ್ಷಿಯಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಡಾ. ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಪುಲೆ ಅವರು ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಎಲ್ಲರೂ ಸ್ಮರಿಸಬೇಕು. ಕರ್ತವ್ಯ ನಿರತ ಶಿಕ್ಷಕರೆಲ್ಲರೂ ಉತ್ತಮ ಶಿಕ್ಷಕರೇ ಆಗಿದ್ದಾರೆ. ಸಮಾಜ ಶಿಕ್ಷಕರ ಸೇವೆಯನ್ನ ಸ್ಮರಿಸುತ್ತದೆ ಎಂದರು. ತಾವೂ ಸಹ ಶಿಕ್ಷಕರಾಗಿಯೇ ವೃತ್ತಿ ಆರಂಭಿಸಿದ ಬಗ್ಗೆ ಹೇಳಿದ ಹೆಚ್ಚುವರಿ ಜಿಲ್ಲಾಧಿಕಾರಿಯವರು ಬೋಧನಾ ವೃತ್ತಿಯನ್ನು ನಿರ್ವಹಿಸಿದ್ದೇನೆ. ಶಿಕ್ಷಕ ವೃತ್ತಿ ಗೌರವಯುತವಾದದ್ದು. ಪ್ರತಿ ವ್ಯಕ್ತಿಯು ಜೀವನದಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಅಷ್ಟರಮಟ್ಟಿಗೆ ಶಿಕ್ಷಕರ ಪ್ರಭಾವ ಮಕ್ಕಳ ಮೇಲೆ ಇರುತ್ತದೆ. ಶಿಕ್ಷಕರು ತಮ್ಮ ಸೇವೆಯನ್ನು ಮಕ್ಕಳ ಏಳಿಗೆಗೆ ನೀಡುತ್ತಾರೆ. ವೈಯಕ್ತಿಕ ಕುಟುಂಬ, ಆರೋಗ್ಯದ ಬಗ್ಗೆಯೂ ಶಿಕ್ಷಕರು ಕಾಳಜಿವಹಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಸಲಹೆ ಮಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಶಿಕ್ಷಕರು ಹಾಗೂ ಅವರ ಕುಟುಂಬದವರಿಗೆ ಗೌರವ ಸಮರ್ಪಿಸಲಾಯಿತು. ನಗರಸಭಾ ಸದಸ್ಯರಾದ ಮಹೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಪ್ರಾಂಶುಪಾಲರಾದ ಎಂ. ಕಾಶಿನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ. ಡಿ. ಸೋಮಣ್ಣೇಗೌಡ, ಡಿವೈಪಿಸಿ ಲಕ್ಷ್ಮೀಪತಿ, ನಾಗೇಂದ್ರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ವೆಂಕಟೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಪಿ. ಮಹದೇವಸ್ವಾಮಿ, ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳಾದ ಮಾದಪ್ಪ, ಮಹಾಲಿಂಗಸ್ವಾಮಿ, ಮಹದೇವಸ್ವಾಮಿ, ಎ. ಶಿವಣ್ಣ, ವೀರಭದ್ರಸ್ವಾಮಿ, ಭರತ್ ಭೂಷಣ್, ಎನ್. ಕಿರಣ್‍ರಾಜು, ನೇಮಿರಾಜು, ನರೇಂದ್ರನಾಥ್, ಮಂಜುನಾಥ್, ಎಂ.ಡಿ. ಮಹದೇವ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್, ಇತರೆ ಗಣ್ಯರು ಮಾಲಾರ್ಪಣೆ ಮಾಡಿದರು. ತದನಂತರ ಸರ್ಕಾರಿ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಡಾ. ಎಸ್. ರಾಧಕೃಷ್ಣನ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರದ ಮೆರವಣಿಗೆಗೆ ರಾಮಚಂದ್ರರಾಜೇ ಅರಸ್ ಅವರು ಚಾಲನೆ ನೀಡಿದರು. ಡಾ. ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ಶೈಕ್ಷಣಿಕ ವಸ್ತು ಪ್ರದರ್ಶನ ಉದ್ಘಾಟಿಸಲಾಯಿತು.

RELATED ARTICLES
- Advertisment -
Google search engine

Most Popular