ಮೈಸೂರು: ಜೆಎಸ್‌ಎಸ್ ಪಾಲಿಟೆಕ್ನಿಕ್‌ನಲ್ಲಿ ಮಂಗಳವಾರ ನಡೆದ ಪ್ರಥಮ ಘಟಿಕೋತ್ಸವದಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪತ್ರ, ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜೆಸಿ ಕ್ಯಾಂಪಸ್‌ನಲ್ಲಿರುವ ಜೆ.ಎಸ್‌ಎಸ್ ಪಾಲಿಟೆಕ್ನಿಕ್ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಇಸ್ರೋ ವಿಜ್ಞಾನಿ ಡಾ.ರವಿಕಿರಣ್.ಎಂ.ಕೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕು. ಆಗ ಮಾತ್ರ ಏನು ಬೇಕಾದರೂ ಸಾಧನೆ ಮಾಡಬಹುದು. ಅಂದುಕೊಂಡ ಗುರಿ ಸಾಧನೆಯೆಡೆಗೆ ಪರಿಶ್ರಮದಿಂದ ಮುನ್ನಡೆದರೆ ಯಾವುದೂ ಅಸಾಧ್ಯವಲ್ಲ ಎಂದರು. ಇಸ್ರೋದಲ್ಲಿ ಹಲವು ಉದ್ಯೋಗಕಾವಕಾಶಗಳಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಇಂದು ಎಲ್ಲಾ ಕ್ಷೇತ್ರದಲ್ಲೂ ತಂತ್ರಜ್ಞಾನದ ಬಳಕೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳಿಗೆ ಅದರ ಅರಿವಿರಬೇಕು. ತಂತ್ರಜ್ಞಾನ ಬಳಸಿಕೊಂಡು ವಿವಿಧ ದೇಶಗಳು ಬಾಹ್ಯಾಕಾಶದಲ್ಲಿ ಹಲವು ಸಾಧನೆ ಮಾಡಿವೆ. ಭಾರತವೂ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿದ್ದು, ಚಂದ್ರಯಾನ-೩, ಆದಿತ್ಯಯಾನ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಭವಿಷ್ಯದಲ್ಲಿ ಡಾಟಾ ಸ್ಟ್ರಕ್ಚರ್, ಆರ್ಟಿಪಿಷಿಯಲ್ ಇಂಟೆಲಿಜೆನ್ಸ್, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ ಕ್ಷೇತ್ರಗಳಿಗೆ ಹೆಚ್ಚಿನ ಮಹತ್ವ ಸಿಗಲಿದೆ. ವಿದ್ಯಾರ್ಥಿಗಳು ಈ ಕ್ಷೇತ್ರಗಳ ಜ್ಞಾನ ಪಡೆದುಕೊಳ್ಳಬೇಕು. ಉತ್ತಮ ಕೌಶಲ್ಯ ಬೆಳೆಸಿಕೊಂಡು ದೇಶಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು. ೨೦೨೨-೨೩ನೇ ಸಾಲಿನಲ್ಲಿ ವಿವಿಧ ವಿಷಯಗಳಲ್ಲಿ ೧೨೩ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ೨೨ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿವಿಧ ವಿಭಾಗಗಳಿಂದ ೭ ವಿದ್ಯಾರ್ಥಿಗಳು ಪ್ರಥಮ ರ್‍ಯಾಂಕ್ ಹಾಗೂ ೭ ವಿದ್ಯಾರ್ಥಿಗಳು ದ್ವಿತೀಯ ರ್‍ಯಾಂಕ್ ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಭಕ್ತವತ್ಸಲ, ಇನ್‌ಫೋಸಿಸ್‌ನ ಡಾ.ಶ್ರೀಕಂಠಗುಪ್ತ, ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನ ಎಚ್‌ಒಡಿ ದೊಡ್ಡಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.