ಮಂಗಳೂರು : ನಾಡಿನೆಲ್ಲೆಡೆ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಕೃಷ್ಣನೂರು ಉಡುಪಿ ಸೇರಿದಂತೆ ಕರಾವಳಿಯಲ್ಲಿ ಸಂಭ್ರಮ ಮನೆಮಾಡಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಮುಂಜಾನೆಯಿಂದಲೇ ಭಕ್ತರು ದೇವರ ದರ್ಶನ ಪಡೆಯಲು ಆಗಮಿಸುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಹೌದು, ಉಡುಪಿ ಜಿಲ್ಲೆಯ ಶ್ರೀ ಕೃಷ್ಣ ದೇವಾಲಯದ ರಥಬೀದಿಯಲ್ಲಿ ಹಬ್ಬದ ಸಡಗರ ಮೇಲೈಸಿದೆ. ದೇವರ ದರ್ಶನ ಮಾಡಿ ಪುನೀತರಾಗುತ್ತಿರುವ ಭಕ್ತರು, ಇಂದು ಉಪವಾಸದಿಂದ ಇರುತ್ತಾರೆ. ರಾತ್ರಿ ೧೨ ಗಂಟೆ ಸುಮಾರಿಗೆ ಅರ್ಘ್ಯ ಪ್ರದಾನ ನಡೆಯಲಿದ್ದು, ಆ ಬಳಿಕ ಫಲಾಹಾರ ಸೇವನೆ ಮಾಡುತ್ತಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಾಳೆ ವಿಟ್ಲಪಿಂಡಿ ನಡೆಯುತ್ತದೆ. ಇದೊಂದು ಜಾತ್ರೆಯ ವಾತಾವರಣ ಸೃಷ್ಟಿಸುವ ಉತ್ಸವ. ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮೃಣ್ಮಯ ಮೂರ್ತಿಯನ್ನು ಪೂಜಿಸಲಾಗುತ್ತಿದ್ದು, ಈ ಮೂರ್ತಿಯನ್ನು ರಥದಲ್ಲಿರಿಸಿ ಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಾಳೆ ಮಧ್ಯಾಹ್ನ ನಡೆಯುವ ಈ ಮೆರವಣಿಗೆಯಲ್ಲಿ ವಿವಿಧ ವೇಷಧಾರಿಗಳು, ಹುಲಿ ವೇಷ ನರ್ತನಗಳು ಗಮನಸೆಳೆಯುತ್ತವೆ. ಇದನ್ನು ವೀಕ್ಷಿಸಲೆಂದೆ ಜನಸಾಗರವೇ ರಥಬೀದಿಗೆ ಹರಿದುಬರುತ್ತದೆ. ಈ ಮೆರವಣಿಗೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಅರ್ಪಿಸಿದ ಉಂಡೆ ಚಕ್ಕುಲಿಯನ್ನು ಭಕ್ತರಿಗೆ ಪ್ರಸಾದವಾಗಿ ಹಂಚಲಾಗುತ್ತದೆ.
ಇನ್ನು ಉಡುಪಿ ಜಿಲ್ಲೆಯ ಸನಿಹದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಭಕ್ತರು ಉಪವಾಸದಿಂದ ಇದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಬಗೆಯ ಖಾದ್ಯಗಳೊಂದಿಗೆ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
