Saturday, April 19, 2025
Google search engine

Homeರಾಜ್ಯನನ್ನ ಮಣ್ಣು ನನ್ನ ದೇಶ ದೇಶಪ್ರೇಮ ಬಿಂಬಿಸುವ ಕಾರ್ಯಕ್ರಮ: ಡಿ ವಿ ಸದಾನಂದ ಗೌಡ

ನನ್ನ ಮಣ್ಣು ನನ್ನ ದೇಶ ದೇಶಪ್ರೇಮ ಬಿಂಬಿಸುವ ಕಾರ್ಯಕ್ರಮ: ಡಿ ವಿ ಸದಾನಂದ ಗೌಡ


ಬೆಂಗಳೂರು: ‘ನನ್ನ ಮಣ್ಣು ನನ್ನ ದೇಶ’ ದೇಶಪ್ರೇಮ ಬಿಂಬಿಸುವ ಕಾರ್ಯಕ್ರಮ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ ವಿ ಸದಾನಂದ ಗೌಡ ತಿಳಿಸಿದರು. ನಗರದ ಕಾಡಮಲ್ಲೇಶ್ವರ ದೇವಸ್ಥಾನದಲ್ಲಿ ಇಂದು ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಕರೆಯ ಮೇರೆಗೆ ಪುಣ್ಯ ಭೂಮಿಯ ಮಣ್ಣು ಶೇಖರಿಸಿ ದೇಶದ ವೀರ ಯೋಧರ ಅಮೃತ ವಾಟಿಕಾ ವನದಲ್ಲಿ ಅದನ್ನು ಸೇರಿಸುವ ಸಂಕಲ್ಪದ ಪುಣ್ಯದಿನವಿದು ಎಂದರು.

ಕೆಂಪೇಗೌಡರ ಪ್ರತಿಮೆ ಅನಾವರಣದ ಸಂದರ್ಭದಲ್ಲೂ ಇಡೀ ರಾಜ್ಯದ ಎಲ್ಲ ಪುಣ್ಯ ಸ್ಥಳಗಳಿಂದ ಮಣ್ಣು ತರಲಾಗಿತ್ತು. ಇವತ್ತು ಇಡೀ ದೇಶದ ಕೆಲಸ ನಡೆದಿದೆ. ದೇಶದ ಪರಂಪರೆ, ಆಚಾರ, ವಿಚಾರಗಳನ್ನು ಕ್ರೋಡೀಕರಿಸುವ ಕಾರ್ಯ ಆಗುತ್ತಿದೆ. ದೇಶ ರಕ್ಷಿಸುವ ಸೈನಿಕರ ವನಕ್ಕೆ ಇಲ್ಲಿಂದ ಕೂಡ ಮಣ್ಣು ಕಳಿಸುವ ಕೆಲಸ ನಡೆಸಲಾಗುತ್ತಿದೆ. ಇದು ಇಡೀ ರಾಜ್ಯದಲ್ಲಿ ಅ. ೩೦ರ ವರೆಗೆ ನಡೆಯಲಿದೆ ಎಂದರು.

ದೇಶದ ಸಮಸ್ತ ಜನತೆಗೆ ಶ್ರೀಕೃಷ್ಣ ಜಯಂತಿಯ ಶುಭಾಶಯ ಕೋರಿದ ಸದಾನಂದ ಗೌಡರು, ಭಗವದ್ಗೀತೆಗೆ ಪೂರಕ ಕೆಲಸ ಇಲ್ಲಿ ನಡೆಯುತ್ತಿದೆ. ದೇಶಪ್ರೇಮ ಇಮ್ಮಡಿಗೊಳಿಸುವ ಮತ್ತು ದೇಶಕ್ಕೆ ಗೌರವ ಕೊಡುವ ಕಾರ್ಯಕ್ರಮ ಇದಾಗಿದೆ. ಈ ಅದ್ಭುತ ಕಾರ್ಯಕ್ರಮದಲ್ಲಿ ಜನತೆ ಭಾಗವಹಿಸಬೇಕೆಂದು ಅವರು ವಿನಂತಿಸಿದರು.

ತಮಿಳುನಾಡಿಗೆ ಕಾವೇರಿ ನೀರಿನ ವಿಚಾರದಲ್ಲಿ ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ನೀರು ಬಿಡುವ ವಿಚಾರದಲ್ಲಿ ‘ಇಂಡಿಯಾ’ದ ಪಾಲುದಾರರಾಗಿ ವರ್ತಿಸುತ್ತಿದ್ದಾರೆ. ಇದು ಕರ್ನಾಟಕ ಜನರಿಗೆ ಮಾಡಿದ ದ್ರೋಹ ಎಂದರು. ಮಾಜಿ ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ್ ಅವರು ಮಾತನಾಡಿ, ನಾಡಿನ ಉದ್ದಗಲಕ್ಕೂ ಮಣ್ಣು ಸಂಗ್ರಹ ಕಾರ್ಯಕ್ರಮ ನಡೆದಿದೆ. ದೇಶದ ಪುಣ್ಯ ಭೂಮಿಯ ಮಣ್ಣಿಗೆ ಗೌರವ ಸಲ್ಲಿಸುವ ಅಭಿಯಾನ ಇದಾಗಿದೆ. ಭಾರತ ಒಂದು ಎಂಬ ಪರಿಕಲ್ಪನೆಯ ಕಾರ್ಯಕ್ರಮ ಇದು ಎಂದು ತಿಳಿಸಿದರು.

ಸನಾತನ ಧರ್ಮವನ್ನು ಇಡೀ ವಿಶ್ವ ಒಪ್ಪಿದೆ. ವೈಜ್ಞಾನಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಈ ಧರ್ಮ ಸರ್ವಶ್ರೇಷ್ಠ. ಇತ್ತೀಚೆಗೆ ಹುಟ್ಟಿದ ಧರ್ಮಗಳ ತಪ್ಪನ್ನು ತಪ್ಪೆಂದು ಹೇಳಲು ಇವರಿಗೆ ಧೈರ್ಯ ಇಲ್ಲ. ದುರಹಂಕಾರದ ಮಾತನಾಡುವುದು ಸರಿಯಲ್ಲ ಎಂದು ಈ ಕುರಿತ ಪ್ರಶ್ನೆಗೆ ಅವರು ಉತ್ತರ ಕೊಟ್ಟರು. ಸಂಸದ ಪಿ ಸಿ ಮೋಹನ್, ಕಾರ್ಯಕ್ರಮದ ನೇತೃತ್ವ ವಹಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, ನಗರ ಜಿಲ್ಲಾ ಅಧ್ಯಕ್ಷರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular