Sunday, April 20, 2025
Google search engine

Homeಸ್ಥಳೀಯದೇವಾಲಯಗಳ ಅಭಿವೃದ್ಧಿಗಿಂತ ಸರ್ಕಾರಕ್ಕೆ ಮಹಿಷ ದಸರಾವೇ ಮುಖ್ಯವಾಗಿದೆ : ಸಂಸದ ಪ್ರತಾಪ್ ಸಿಂಹ

ದೇವಾಲಯಗಳ ಅಭಿವೃದ್ಧಿಗಿಂತ ಸರ್ಕಾರಕ್ಕೆ ಮಹಿಷ ದಸರಾವೇ ಮುಖ್ಯವಾಗಿದೆ : ಸಂಸದ ಪ್ರತಾಪ್ ಸಿಂಹ

ಮೈಸೂರು : ಈ ಸರ್ಕಾರಕ್ಕೆ ನಮ್ಮ ದೇವಾಲಯಗಳ ಅಭಿವೃದ್ಧಿಗಿಂತ ಮಹಿಷ ದಸರಾವೇ ಹೆಚ್ಚು ಮುಖ್ಯವಾಗಿದೆ. ಹಾಗಾಗಿ ಈ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ನಗರದ ಕೆ.ಜಿ ಕೊಪ್ಪಲಿನ ಹತ್ತಿರ ಇರುವ ರೋಡ್ ಅಂಡರ್ ಬ್ರಿಡ್ಜ್‌ನ ರೈಲ್ವೆ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿದ ನಂತರ, ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಸಾದ್ ಯೋಜನೆಗೆ ಕೇಂದ್ರ ಸರ್ಕಾರದಿಂದ ೪೬ ಕೋಟಿ ರೂಪಾಯಿ ಬಂದಿದೆ. ಈ ಬಗ್ಗೆ ಟೆಂಡರ್ ಕರೆದು ಕಾಮಗಾರಿ ಶುರುಮಾಡಬೇಕಾಗಿದೆ ಎಂದು ಹೇಳಿದರು.

ಜೊತೆಗೆ ಸ್ವದೇಶಿ ದರ್ಶನ್ ಸ್ಕೀಮ್‌ನಲ್ಲಿ ೮೦ ಕೋಟಿ ರೂಪಾಯಿವರೆಗೆ ಯೋಜನಾ ವರದಿಯನ್ನು ನೀಡಬಹುದು. ಈ ಬಗ್ಗೆ ಡಿಪಿಆರ್ ನಡೆಯುತ್ತಿದೆ. ಪ್ರಸಾದ್ ಯೋಜನೆಯಲ್ಲಿ ಬಿಡುಗಡೆಯಾಗಿರುವ ೪೬ ಕೋಟಿ ಕೇವಲ ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಮಾತ್ರ ಬಿಡುಗಡೆ ಆಗಿದೆ. ಆದರೆ, ಚಾಮುಂಡಿ ಬೆಟ್ಟದ ಹುಂಡಿಯಲ್ಲಿ ೧೩೦ ಕೋಟಿ ರೂ ಹಣ ಇದೆ. ಈ ಹಣದಿಂದ ಪ್ರತಿ ವರ್ಷ ೧೦ ರಿಂದ ೨೦ ದೇವಾಲಯಗಳನ್ನು ಅಭಿವೃದ್ಧಿಪಡಿಸಲು ನಾವು ಯೋಜನೆಯನ್ನು ರೂಪಿಸಿದ್ದೆವು. ಆದರೆ, ನಮ್ಮ ಸರ್ಕಾರ ಬರಲಿಲ್ಲ. ಈಗಿನ ಸರ್ಕಾರಕ್ಕೆ ದೇವಾಲಯಗಳ ಅಭಿವೃದ್ಧಿಗಿಂತ ಮಹಿಷಾ ದಸರಾವೇ ಹೆಚ್ಚು ಮುಖ್ಯವಾಗಿರುತ್ತದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸರ್ಕಾರದ ಬಳಿ ಜನರಿಗೆ ಸಂಬಳ ಕೊಡಲು ದುಡ್ಡಿಲ್ಲ. ಇನ್ನು ಅಭಿವೃದ್ಧಿ ಕಾರ್ಯಗಳಿಗೆ ಯಾವ ರೀತಿ ಹಣ ಬಿಡುಗಡೆ ಮಾಡುತ್ತಾರೆ . ಅನುದಾನ ಕೊಡುತ್ತಾರೆ ಎಂದು ನಂಬಿಕೊಂಡು ಕೂರಲು ಆಗುವುದಿಲ್ಲ. ಮೈಸೂರು ನಗರದ ಒಳಗಿನ ಕಾಮಗಾರಿಗಳಿಗೆ ಮಹಾನಗರ ಪಾಲಿಕೆಯಿಂದ ಹೆಚ್ಚಿನ ಹಣವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು. ಹಿಂದೆ ನಮ್ಮ ಸರ್ಕಾರ ಇದ್ದಾಗ ಮೂರು ಮುಕ್ಕಾಲು ವರ್ಷ ಆಡಳಿತ ನೀಡಿದೆ. ಈ ಸಂದರ್ಭ ಮೊದಲು ನೆರೆ ಬಂತು. ಬಳಿಕ ೨ ವರ್ಷ ಕೋವಿಡ್ ಬಂತು. ಬಳಿಕ ಒಂದು ವರ್ಷದಲ್ಲಿ ಏನೆಲ್ಲಾ ಅಭಿವೃದ್ಧಿ ಮಾಡಬೇಕೋ ಅದನ್ನು ಮಾಡಿದ್ದೇವೆ. ಏರ್ ಪೋರ್ಟ್ ಅಭಿವೃದ್ಧಿ, ಜಲಜೀವನ್ ಮಿಷನ್ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ಸಾವಿರಾರು ಕೋಟಿ ರೂಪಾಯಿ ತಂದು ಅಭಿವೃದ್ಧಿ ಮಾಡಿದ್ದೇವೆ. ಬಳಿಕ ಪುನಃ ನಮ್ಮ ಸರ್ಕಾರ ಬರಲಿಲ್ಲ ಎಂದು ಹೇಳಿದರು.

ಈಗಿನ ಸರ್ಕಾರವನ್ನು ಮೈಸೂರು ನಗರದ ಒಳಗಿನ ರೈಲ್ವೆ ಕಾಮಗಾರಿಗಳಿಗೆ ಮತ್ತು ಪೂರಕ ಕಾಮಗಾರಿಯನ್ನು ಮಾಡಲು ೩೦ ಕೋಟಿ ಹಣ ಕೇಳಿದರೂ, ಇದನ್ನು ನೀಡಲು ಸರ್ಕಾರದ ಬಳಿ ಹಣ ಇಲ್ಲ. ೩೦ ಕೋಟಿ ಹಣ ಕೊಟ್ಟರೆ ಸಣ್ಣಪುಟ್ಟ ಅಭಿವೃದ್ಧಿ ಮಾಡಲು ಸಾಧ್ಯ ಎಂದರು. ಇದೇ ವೇಳೆ, ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳೊಂದಿಗೆ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿದರು.

ಸನಾತನ ಧರ್ಮದ ಬಗ್ಗೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಮಗ, ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಜನ ನೋಡುತ್ತಿದ್ದಾರೆ. ಜನರಿಗೆ ವಿವೇಚನಾ ಶಕ್ತಿ ಇದೆ. ಇದಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

RELATED ARTICLES
- Advertisment -
Google search engine

Most Popular