ಚಿತ್ರದುರ್ಗ: ಜಿಲ್ಲೆಯಲ್ಲಿ ಆಗಸ್ಟ್ 7ರಿಂದ 12ರವರೆಗೆ ನಡೆದ 1ನೇ ಸುತ್ತಿನ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನ ಯಶಸ್ವಿಯಾಗಿದೆ. ಎಸ್.11ರಿಂದ 16ರವರೆಗೆ 2ನೇ ಸುತ್ತಿನ ಲಸಿಕಾ ಅಭಿಯಾನ ನಡೆಯಲಿದ್ದು, 768 ಗರ್ಭಿಣಿಯರು, 2843 ಎರಡು ವರ್ಷದೊಳಗಿನ ಮಕ್ಕಳು, 2ರಿಂದ 5 ವರ್ಷದೊಳಗಿನ 14 ಮಕ್ಕಳು ಸೇರಿ ಒಟ್ಟು 3625 ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಲಸಿಕೆ ಪಡೆದ ಪ್ರತಿ ಮಗುವಿನ ದಾಖಲೆಯನ್ನು ತಪ್ಪದೇ ಸಂಗ್ರಹಿಸಿ ಯು-ವಿನ್ ತಂತ್ರದಲ್ಲಿ ಅಳವಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ರಂಗನಾಥ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಪಡೆ ಸಭೆಯಲ್ಲಿ ಈ ಕುರಿತು ಮಾತನಾಡಿದರು.
ಪ್ರತಿ 5 ಮಕ್ಕಳಿಗೆ ಲಸಿಕೆ ಕಾರ್ಯಕ್ರಮ ನಡೆಸಬೇಕು. ಲಸಿಕೆ ಅಭಿಯಾನದ ಯಶಸ್ಸಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕು. ತಾಲೂಕು ನೋಡಲ್ ಅಧಿಕಾರಿಗಳು ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಲಸಿಕಾ ಅಭಿಯಾನ ಯಶಸ್ವಿಗೆ ಶ್ರಮಿಸಬೇಕು. ತಾಲೂಕಿನಲ್ಲಿ ಲಸಿಕೆಯಿಂದ ವಂಚಿತರಾದ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ಸಮೀಕ್ಷೆ ಮಾಡಿ, ಕ್ರಿಯಾ ಯೋಜನೆ ರೂಪಿಸಲಾಗಿದೆ. ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳಿಗೆ ಲಸಿಕೆ ಹಾಕಿಸಲು ಕರೆತರಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಆರ್‌ಸಿಎಚ್ ಅಧಿಕಾರಿ ಡಾ. ಅಭಿನವ್ ಮಾತನಾಡಿ, ಜಿಲ್ಲೆಯಾದ್ಯಂತ ಮಾರಕ ರೋಗಗಳ ವಿರುದ್ಧ ಲಸಿಕೆಯಿಂದ ವಂಚಿತರಾಗಿರುವ ಐದು ವರ್ಷದೊಳಗಿನ ಎಲ್ಲಾ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆಗಳನ್ನು ಪೂರ್ಣಗೊಳಿಸಲು ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನವನ್ನು ಆಯೋಜಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಲಸಿಕಾ ಅಭಿಯಾನಕ್ಕೆ ಕೈಜೋಡಿಸಬೇಕು. ಯೋಜಿಸಲಾದ ಲಸಿಕೆಗಳ ಸಂಖ್ಯೆ ಮತ್ತು ನಡೆಸಿದ ಲಸಿಕೆಗಳ ಸಂಖ್ಯೆಯು ಹೊಂದಿಕೆಯಾಗಬೇಕು. ಲಸಿಕೆ ಅಧಿಕಾರಿಗಳು ಸರಿಯಾದ ಯೋಜನೆಯನ್ನು ಅನುಸರಿಸಬೇಕು.
ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಕ್ಷ ಣ ಇಲಾಖೆ ಅಧಿಕಾರಿಗಳು ಸೇರಿದಂತೆ ನಾನಾ ಇಲಾಖೆಗಳ ಸಮನ್ವಯದೊಂದಿಗೆ ದಡಾರ ಮತ್ತು ರುಬೆಲ್ಲಾ ರೋಗ ನಿರ್ಮೂಲನೆಗೆ ಹೇಗೆ ಕೆಲಸ ಮಾಡಬೇಕು ಎಂಬುದರ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಜಿಲ್ಲಾ ಮಟ್ಟದ ವರದಿ ಸಲ್ಲಿಸಬೇಕು. . ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಭಾರತಿ ಆರ್.ಬಣಕಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ದೇವರಾಜ್, ಜಿಲ್ಲಾ ಕುಟುಂಬ ಯೋಜನಾಧಿಕಾರಿ ಡಾ.ರೇಣುಪ್ರಸಾದ್ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.