Monday, April 21, 2025
Google search engine

Homeರಾಜ್ಯಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನಿರಂತರ ನೀರು ಹರಿಸುವ ಬಗ್ಗೆ ಶೀಘ್ರ ಕ್ರಮ : ಮಧು ಎಸ್.ಬಂಗಾರಪ್ಪ

ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನಿರಂತರ ನೀರು ಹರಿಸುವ ಬಗ್ಗೆ ಶೀಘ್ರ ಕ್ರಮ : ಮಧು ಎಸ್.ಬಂಗಾರಪ್ಪ

ಶಿವಮೊಗ್ಗ : ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ವಾಡಿಕೆ ಪ್ರಮಾಣದ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಲ್ಲಿ ಗಣನೀಯ ಪ್ರಮಾಣದ ನೀರಿನ ಕೊರತೆ ಇರುವುದರಿಂದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬೆಳೆದಿರುವ ಭತ್ತ ಮತ್ತು ತೋಟಗಾರಿಕೆ ಬೆಳೆಗಳಿಗೆ ನಿರಂತರ ನೀರು ಹರಿಸಲು ಅನುಕೂಲವಾಗುವಂತೆ ಸೆಪ್ಟಂಬರ್ 11ರೊಳಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಕಾಡಾ ಅಧ್ಯಕ್ಷ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.

ಅವರು ಇಂದು ಶಿವಮೊಗ್ಗ ಸಮೀಪದ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಸಕ್ತ ಸಾಲಿನ ಭದ್ರಾ ಜಲಾಶಯದ 83ನೇ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈಗಾಗಲೇ ರಾಜ್ಯದ ಉಪಮುಖ್ಯಮಂತ್ರಿಗಳು ಈ ಸಂಬಂಧ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿದ್ದರ ಮೇರೆಗೆ ದಿನಾಂಕ ನಿಗಧಿಪಡಿಸಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ, ಅದರ ಸದ್ಭಳಕೆ ಹಾಗೂ ರೈತರ ಹಿತ ಕಾಯುವಲ್ಲಿ ಇರಬಹುದಾದ ಸಾಧಕ-ಬಾದಕಗಳ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಲ್ಲಿ ಚರ್ಚಿಸಿ, ರೈತ ಮುಖಂಡರ, ಅಧಿಕಾರಿಗಳ ಹಾಗೂ ತಜ್ಞರ ಅಭಿಪ್ರಾಯ ಪಡೆದು, ಈಗಾಗಲೇ ಬೆಳೆಯಲಾಗಿರುವ ಭತ್ತ, ಬೇಸಿಗೆ ಹಂಗಾಮಿನಲ್ಲಿ ಅಡಿಕೆ, ತೆಂಗು ಮತ್ತು ತೋಟಗಾರಿಕೆ ಬೆಳೆಗಳ ಸಂರಕ್ಷಣೆ ಹಾಗೂ ಈ ಭಾಗದ ಜನರ ಕುಡಿಯುವ ನೀರಿನ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.

ರೈತ ಮುಖಂಡ ಬಸವರಾಜಪ್ಪ ಅವರು ಮಾತನಾಡಿ, ಜಲಾಶಯದಿಂದ ಬಿಡುಗಡೆಯಾಗುವ ಶೇ.30ರಷ್ಟು ನೀರು ಸದ್ಬಳಕೆಯಾಗುತ್ತಿಲ್ಲ. ಅದರ ವ್ಯವಸ್ಥಿತ ನಿರ್ವಹಣೆಗಾಗಿ ಸಿಬ್ಬಂಧಿಗಳನ್ನು ನಿಯೋಜಿಸಿ ಹಾಗೂ ಚಾನಲ್‍ಗಳ ದುರಸ್ತಿಗೆ ಅನುದಾನ ನೀಡುವಂತೆ ಒತ್ತಾಯಿಸಿದ ಅವರು, ನೀರನ್ನು ಬೆಳೆಗೆ ಅಗತ್ಯವಿರುವಂತೆ ತಡೆಹಿಡಿಯುವ ಹಾಗೂ ಹರಿಸುವ ಬಗ್ಗೆ ನಿರ್ಣಯ ಕೈಗೊಂಡಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.

ಸಭೆಯಲ್ಲಿ ಶಾಸಕರಾದ ಶ್ರೀನಿವಾಸ್, ಶ್ರೀಮತಿ ಶಾರದಾ ಪೂರ್ಯಾನಾಯ್ಕ್, ಎಸ್.ಎನ್.ಚನ್ನಬಸಪ್ಪ, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಡಾ. ಎಂ.ವಿ.ವೆಂಕಟೇಶ್, ಶ್ರೀಮತಿ ಮೀನಾ ನಾಗರಾಜ್, ರೈತ ಮುಖಂಡರಾದ ಕೆ.ಟಿ.ಗಂಗಾಧರ್, ಬಸವರಾಜಪ್ಪ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿನ ನೀರಾವರಿ ಸಲಹಾ ಸಮಿತಿ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು,

RELATED ARTICLES
- Advertisment -
Google search engine

Most Popular