ಪಿರಿಯಾಪಟ್ಟಣ: ತಾಲೂಕಿನ ಮುತ್ತೂರು ಗ್ರಾಮದಲ್ಲಿ ಗುರು ಮೆಡಿಕಲ್ಸ್ ಮತ್ತು ಶ್ರೀ ಕ್ಲಿನಿಕ್ ನ 6 ನೇ ಶಾಖೆ ಉದ್ಘಾಟನೆ ಅಂಗವಾಗಿ ಮೈಸೂರಿನ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಗುರು ಮೆಡಿಕಲ್ ಮತ್ತು ಶ್ರೀ ಕ್ಲಿನಿಕ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಐಕಾನ್ಸ್, ಕರುನಾಡ ಜನಜಾಗ್ರತಿ ವೇದಿಕೆ, ರೈತ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಶಿಬಿರದಲ್ಲಿ ಕೆಪಿಸಿಸಿ ಸದಸ್ಯ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಅವರು ಭಾಗವಹಿಸಿ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿನ ಜನರ ಆರೋಗ್ಯ ಹಿತ ದೃಷ್ಟಿಯಿಂದ ಗುರು ಮೆಡಿಕಲ್ ಹಾಗೂ ಶ್ರೀ ಕ್ಲಿನಿಕ್ ತಾಲೂಕಿನಾದ್ಯಂತ ಶಾಖೆ ತೆರೆದು ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ ಬಸವರಾಜು ಅವರು ಮಾತನಾಡಿ ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿನಂತೆ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿ ನಿಯಮಿತ ಆಹಾರ ಪದ್ಧತಿ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು, ಗ್ರಾಮಾಂತರ ಪ್ರದೇಶಗಳಲ್ಲಿ ತಜ್ಞ ವೈದ್ಯರ ಮುಖಾಂತರ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಗುರು ಮೆಡಿಕಲ್ ಹಾಗೂ ಶ್ರೀ ಕ್ಲಿನಿಕ್ ಸೇವೆ ಇತರರಿಗೆ ಮಾದರಿಯಾಗಲಿ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಮಾತನಾಡಿ ತಾಲೂಕಿನಾದ್ಯಂತ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮೈಸೂರಿನ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆ ಹಾಗೂ ಗುರು ಮೆಡಿಕಲ್ ಮತ್ತು ಶ್ರೀ ಕ್ಲಿನಿಕ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಉದ್ಯಮಿ ರಘುಪತಿ, ರೈತ ಸಂಘ ತಾಲೂಕು ಅಧ್ಯಕ್ಷ ಕೆ.ಎಸ್ ಸ್ವಾಮಿಗೌಡ, ಕರುನಾಡ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಬಿ.ಟಿ ಸಚ್ಚಿದಾನಂದ್ ಮಾತನಾಡಿದರು, ಈ ವೇಳೆ ಕರುನಾಡ ಜನಜಾಗೃತಿ ವೇದಿಕೆ ವತಿಯಿಂದ ಖ್ಯಾತ ವೈದ್ಯರಾದ ಡಾ.ವೈ.ವಿ ಪ್ರಕಾಶ್ ರವರಿಗೆ ವೈದ್ಯರತ್ನ ಹಾಗೂ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್ ಸ್ವಾಮಿಗೌಡ ಅವರಿಗೆ ರೈತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಅಂದಾಜು 100ಕ್ಕೂ ಹೆಚ್ಚು ಮಂದಿ ಉಚಿತ ಆರೋಗ್ಯ ತಪಾಸಣೆಗೊಳಪಟ್ಟರು.
ಈ ಸಂದರ್ಭ ರೋಟರಿ ಐಕಾನ್ಸ್ ನಿರ್ದೇಶಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸಿ.ಎನ್ ವಿಜಯ್, ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಯ ಡಾ ಪೂರ್ವಿಕ, ಮಾರುಕಟ್ಟೆ ವ್ಯವಸ್ಥಾಪಕ ಮಹೇಶ್ ಮತ್ತು ಸಿಬ್ಬಂದಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನಿರೂಪಮ ರಾಜೇಶ್, ಮುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಮತ್ತು ಸದಸ್ಯರು, ಯಜಮಾನರಾದ ರಾಜೇಗೌಡ, ಜೆ.ಪಿ ಗೌಡ್ರು, ಶಿವಾಜಿ, ಅಂಬಿ, ಸಿದ್ದೇಶ್, ಸುನೀಲ್, ಶ್ರೀಪತಿ, ಸುನೀಲ್, ಪಾಪಣ್ಣ, ರೈತ ಸಂಘದ ಗುರುರಾಜ್, ಗಣೇಶ್, ಹರೀಶ್ ರಾಜೆಅರಸ್ ಪತ್ರಕರ್ತರಾದ ಅಶೋಕ್, ಇಮ್ತಿಯಾಜ್ ಅಹಮದ್, ಹೆಚ್.ಕೆ ಮಹೇಶ್, ರಾಜೇಶ್ ಎಂ ರಾವ್ ಮತ್ತಿತರಿದ್ದರು.