ಹುಬ್ಬಳ್ಳಿ: ನಟ ಪ್ರಕಾಶ್ ರಾಜ್ ಸೇರಿ ಅತೃಪ್ತ ಆತ್ಮಗಳು ಸುದ್ದಿಯಲ್ಲಿ ಇರಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರನ್ನು ನಾವು ಜಂಟಲ್’ಮನ್ ಎಂದು ತಿಳಿದಿದೆವು. ಆದರೆ ಜಿ.ಪರಮೇಶ್ವರ್ ಕೂಡಾ ಮತಬ್ಯಾಂಕ್ ರಾಜಕೀಯಕ್ಕೆ ಏನೇನೂ ಮಾತನಾಡುತ್ತಿದ್ದಾರೆ. ಹಿಂದೂ, ಸನಾತನ ಧರ್ಮ ಅನ್ನೋದ ನಿತ್ಯ ನೂತನ, ಚಿರಪುರಾತನ, ಸನಾತನ ಸಂಸ್ಕೃತಿ ಬಹಳ ಪುರಾತನವಾಗಿದೆ ಎನ್ನೋದು ಮೊದಲು ತಿಳಿದುಕೊಳ್ಳಲಿ ಎಂದು ಹರಿಹಾಯ್ದರು.
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವಹೇಳನಕಾರಿ ಮಾತಾಡಿದ್ದಾರೆ. ಅಚಾನಕ್ಕಾಗಿ ಅವರು ಹೇಳಿಕೆ ಕೊಟ್ಟಿಲ್ಲ. ಸನಾತನ ಧರ್ಮದ ವಿರುದ್ಧವಾಗಿಯೇ ಅಲ್ಲಿ ಕಾನ್ಫರೆನ್ಸ್ ಮಾಡಲಾಗಿತ್ತು. ಈವರೆಗೆ ಕಾಂಗ್ರೆಸ್ ಪಾರ್ಟಿ ಅದನ್ನು ಖಂಡಿಸಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೇ ಸಮರ್ಥಿಸಿಕೊಂಡಿದ್ದಾರೆ ಎಂದರು.
ರಾಹುಲ್ ಗಾಂಧಿ ಅಮೇರಿಕದಲ್ಲಿ ಹೋಗಿ ಮುಸ್ಲೀಮ್ ಲೀಗ್ ಸೆಕ್ಯುಲರ್ ಪಾರ್ಟಿ ಎಂದಿದ್ದರು. ಮುಸ್ಲೀಮ್ ಲೀಗ್‌ನಿಂದ ದೇಶ ವಿಭಜನೆಯಾಗಿದೆ, ನರಮೇಧವಾಗಿದೆ. ಘಮಂಡಿಯಾ ಘಟಬಂಧನ ಉಳಿಸಿಕೊಳ್ಳುವ ಆತುರದಲ್ಲಿ ಹೇಳಿಕೆಯನ್ನು ಖಂಡಿಸಿಲ್ಲ. ಸುತ್ತು ಬಳಸಿ ಎಲ್ಲಾ ಧರ್ಮ ನಂಬುತ್ತೇವೆ ಅಂತಾರೆ. ಈ ಬಗ್ಗೆ ರಾಹುಲ್ ಗಾಂಧಿಯವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಡಿಸಿಎಂ ಡಿ.ಕೆ. ಶಿವಕುಮಾರ್ ದೇವಸ್ಥಾನಕ್ಕೆ ಹೋಗ್ತಾರೆ ಅವರ ನಿಲುವೇನು. ಡಿಎಮ್‌ಕೆ ಹೇಳಿಕೆ ಖಂಡಿಸಲು ನಿಮಗೆ ಶಕ್ತಿಯಿಲ್ಲ. ದೇಶದ ಸಂಸ್ಕೃತಿ, ನಂಬಿಕೆ, ಸಮಗ್ರತೆ ಏನಾದರೂ ಆಗಲಿ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ತುಷ್ಟೀಕರಣದ ರಾಜಕೀಯದ ಹಾದಿ ತಲುಪಿದೆ. ಕಾಂಗ್ರೆಸ್ ಪಕ್ಷ ಇದರ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದುಒತ್ತಾಯಿಸಿದರು.