ಪಿರಿಯಾಪಟ್ಟಣ: ತಾಲೂಕಿನ ಬೆಕ್ಕರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಮನರಂಜನೆ ಆಟೋಟ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸುವ ಮೂಲಕ ಕೇಕ್ ಕಟ್ ಮಾಡಿಸಿ ಶುಭಕೋರಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ವಿನೂತನವಾಗಿ ಆಚರಿಸಿದರು.
ಶಿಕ್ಷಕರಿಗಾಗಿ ಕಣ್ಣು ಕಟ್ಟಿ ಮಡಿಕೆ ಹೊಡೆಯುವುದು, ಮ್ಯೂಸಿಕಲ್ ಚೇರ್ ಬಕೆಟ್ ಗೆ ಬಾಲ್ ಎಸೆಯುವುದು ಹಾಗೂ ಪಿರಮಿಡ್ ಆಟದ ಸ್ಪರ್ಧೆ ಆಯೋಜಿಸಲಾಗಿತ್ತು ಈ ವೇಳೆ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರ ಗೆಲುವಿಗೆ ಹುರಿದುಂಬಿಸುತ್ತಿದ್ದು ವಿಶೇಷವಾಗಿತ್ತು.
ಮುಖ್ಯ ಶಿಕ್ಷಕ ಬಿ.ಪಿ ಚನ್ನೇಗೌಡ ಅವರು ಮಾತನಾಡಿ ಪ್ರತಿನಿತ್ಯ ಶಾಲಾ ಅವಧಿಯಲ್ಲಿ ವಿವಿಧ ಶೈಕ್ಷಣಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಶ್ರಮಿಸುವ ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ವಿನೂತನವಾಗಿ ಆಚರಿಸಿರುವುದು ಸಂತಸ ತಂದಿದೆ, ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದ ಮೂಲಕ ಒಳ್ಳೆಯ ಫಲಿತಾಂಶ ಪಡೆದು ಪೋಷಕರು ಹಾಗೂ ಶಿಕ್ಷಕರಿಗೆ ಕೀರ್ತಿ ತಂದು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬಾಳುವಂತೆ ತಿಳಿಸಿದರು.
ಈ ಸಂದರ್ಭ ಶಿಕ್ಷಕರಾದ ವಿಶುಕುಮಾರ್, ಯೋಗೇಶ್, ಕೃಷ್ಣ, ಗೌರವ ಶಿಕ್ಷಕರಾದ ಚೈತ್ರ, ರಕ್ಷಿತ್, ಅತಿಥಿ ಶಿಕ್ಷಕಿ ಆಶಾ ಹಾಗೂ ವಿದ್ಯಾರ್ಥಿಗಳು ಇದ್ದರು.
