ಬೆಂಗಳೂರು: ಹಾಸನ ಲೋಕಸಭೆ ಕ್ಷೇತ್ರದಿಂದ ತಾವು ಸಂಸದರಾಗಿ ಆಯ್ಕೆ ಆಗಿರುವುದನ್ನು ಅಸಿಂಧುಗೊಳಿಸಿ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೆ ಅಸಿಂಧು ಆದೇಶಕ್ಕೆ ತಡೆ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರ ಪೀಠ, ಮುಂದಿನ ಸೋಮವಾರ ಅಥವಾ ಮಂಗಳವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿದೆ. ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲ ಉದಯಹೊಳ್ಳ ಅವರು ಹಾಜರಾಗಿ, ಅಸಿಂಧು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು. ಅಲ್ಲಿಯವರೆಗೆ ಹೈಕೋರ್ಟ್‌ನ ಅಸಿಂಧು ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.
ಬಳಿಕ ಅರ್ಜಿದಾರ ದೇವರಾಜೇಗೌಡ ಪರ ವಾದ ಮಂಡಿಸಿದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು, ಅಸಿಂಧು ಆದೇಶಕ್ಕೆ ತಡೆ ನೀಡಬಾರದು. ತಡೆ ನೀಡಲು ಈ ನ್ಯಾಯಾಲಯಕ್ಕೆ ಅವಕಾಶವಿಲ್ಲ. ಆದೇಶ ಹೊರಡಿಸಿದ ದಿನವೇ ತಡೆಗೆ ಕೋರಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಅರ್ಜಿ ಸಲ್ಲಿಸಲು ವಿಳಂಬ ಮಾಡಲಾಗಿದೆ ಎಂದು ಆಕ್ಷೇಪಿಸಿದರು.
ಪ್ರಮೀಳಾ ನೇಸರ್ಗಿ ಅವರು, ಅಸಿಂಧು ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ಗೆ ಅವಕಾಶ ಇಲ್ಲ ಎಂದು ತಿಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಅಸಿಂಧು ಆದೇಶ ಮಾಡಿದ ಮೇಲೆ ರೇವಣ್ಣ ಅವರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವವರೆಗೆ ತಡೆ ನೀಡಲು ಅವಕಾಶವಿದೆ. ಮೇಲ್ಮನವಿ ಸಲ್ಲಿಕೆಗೆ ೩೦ ದಿನಗಳ ಕಾಲಾವಕಾಶ ಇದೆ. ಅಲ್ಲಿಯವರೆಗೆ ಅಸಿಂಧು ಆದೇಶಕ್ಕೆ ತಡೆ ನೀಡಲು ಜನಪ್ರತಿನಿಧಿಗಳ ಕಾಯ್ದೆಯಲ್ಲಿಯೇ ಅವಕಾಶ ಇದೆ ಎಂದು ಮೌಖಿಕವಾಗಿ ತಿಳಿಸಿದರು.
ಮತ್ತೊಬ್ಬ ಅರ್ಜಿದಾರ ಎ.ಮಂಜು ಪರ ವಕೀಲರು, ರೇವಣ್ಣ ಅವರ ಮಧ್ಯಂತರ ಅರ್ಜಿಗೆ ತಮ್ಮ ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸಿದರು. ಈ ಬಗ್ಗೆ ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿದೆ.