ಹೊಸೂರು: ಇದೇ ಪ್ರಥಮ ಬಾರಿಗೆ ಪುರಾಣ ಪ್ರಸಿದ್ದ ಚುಂಚನಕಟ್ಟೆ ಶ್ರೀರಾಮ ದೇವಾಲಯದಲ್ಲಿ ಕಡೇ ಶ್ರಾವಣ ಪ್ರಯುಕ್ತ ಚಿಕ್ಕಜಾತ್ರೆಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿಂದ ನಡೆಯಿತು.
ಶನಿವಾರ ಬೆಳಿಗ್ಗೆ 11.15 ಗಂಟೆಯ ಸುಮಾರಿನಲ್ಲಿ ದೇವಾಲಯದಿಂದ ಉತ್ಸಾಹ ರಾಮ ಸೀತೆಯ ಮೂರ್ತಿಗಳನ್ನು ವಾದ್ಯಗೋಷ್ಠಿಯ ಮೂಲಕ ಜಯಕಾರದೊಂದಿಗೆ ಮೆರವಣಿಗೆ ಮಾಡಿ, ಹೂವಿನ ಅಲಂಕೃತ ಚಿಕ್ಕ ರಥಕ್ಕೆ ತಂದು ಕೂರಿಸಲಾಯಿತು.
ನಂತರ ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ್ದ ಭಕ್ತರು ಚಿಕ್ಕರಥವನ್ನು ಭಾರಿ ಜಯಘೋಷಣೆಯೊಂದಿಗೆ ದೇವಾಲಯದ ಸುತ್ತ ಎಳೆದು ಸಂಭ್ರಮಿಸಿ ತಮ್ಮಇಷ್ಟಾರ್ಥವನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

ದೇವಾಲಯದಲ್ಲಿ ಮುಂಜಾನೆಯಿಂದಲೇ ಶ್ರೀರಾಮ ಲಕ್ಷ್ಮಣ ಮತ್ತು ಸೀತೆಯ ಮೂರ್ತಿಗಳಿಗೆ ಕ್ಷೀರಾಭಿಷೇಕ, ಎಳನೀರು, ಮೊಸರು, ಅರಿಶಿನ ಕುಂಕುಮ,ಸೇರಿದಂತೆ ಪಂಚಾಮೃತಭಿಷೇಕ ಮಾಡಿದ ವಿಶೇಷ ಅರ್ಚನೆ ಹೋಮ ಹವನಗಳು ಹಾಗೂ ಇನ್ನಿತರ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಜಾತ್ರೆ ಅಂಗವಾಗಿ ದೇವಾಲಯದ ಆಡಳಿತಧಿಕಾರಿ ರಘು ಅವರ ನೇತೃತ್ವದಲ್ಲಿ ದೇವಾಲಯದ ಅರ್ಚಕರಾದ ವಾಸುದೇವನ್ ಮತ್ತು ನಾರಾಯಣ್ ಅಯ್ಯಂಗಾರ್ ಅವರು ಶ್ರೀರಾಮನಿಗೆ ಹೂವು ಮತ್ತು ಸಿಹಿ ತಿಂಡಿಗಳಿಂದ ವಿಶೇಷ ಅಲಂಕಾರ ಮಾಡಿ ಭಕ್ತರು ಮನಸೂರೆಗೊಳ್ಳುವಂತೆ ಮಾಡಿದರು.
ಭಕ್ತಿಭಾವದಿಂದ ನವವಿವಾಹಿತರು ಹಾಗೂ ಭಕ್ತರು ವಿಶೇಷ ಪೂಜೆಪುನಸ್ಕಾರದೊಂದಿಗೆ ಮುಡಿ, ಉತ್ಸವ ಸೇವೆ, ಇನ್ನಿತರ ಹರಕೆ ತೀರಿಸಿ ನಂತರ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ನಂತರ ದೇವಾಲಯದ ವತಿಯಿಂದ ಏರ್ಪಡಿಸಿದ್ದ ಪ್ರಸಾದವನ್ನು ಸ್ವೀಕರಿಸಿದರು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ತಮ್ಮ ಪತ್ನಿ ವನಜಾಕ್ಷಮ್ಮ ಮತ್ತು ಹೆಬ್ಬಾಳು ಡೈರಿ ಮಾಜಿ ಅಧ್ಯಕ್ಷ ಸೋಮಣ್ಣ ಭಾಗವಹಿಸಿ ಶ್ರೀರಾಮನಿಗೆ ಪೂಜೆ ಸಲ್ಲಿಸಿದರು.